ಸತ್ಯದ ಮೇಲೆ ಕತ್ತಲೆ ಹೇರಿದ ತಂತ್ರಜ್ಞಾನ

Update: 2021-07-07 06:09 GMT

ಭಾಗ-11

‘ಗೂಗ್ಲ್ ಮ್ಯಾಪ್’ ಫೆಲೆಸ್ತೀನ್‌ನ ಅಸ್ತಿತ್ವವನ್ನೇ ಒಪ್ಪುವುದಿಲ್ಲ.

ಜಗತ್ತಿನ 439 ಕೋಟಿ ಇಂಟರ್‌ನೆಟ್ ಬಳಕೆದಾರರ ಪೈಕಿ ಸುಮಾರು 400 ಕೋಟಿ ಮಂದಿ ಗೂಗ್ಲ್ ಬಳಕೆದಾರರು. ಇಷ್ಟೊಂದು ಬಲಿಷ್ಠವಾಗಿರುವ ಗೂಗ್ಲ್ ಈ ರೀತಿ ಇಸ್ರೇಲ್‌ನ ಭಟ್ಟಂಗಿಯಾಗಿ ವರ್ತಿಸುತ್ತಿರುವುದು ಇದೇ ಮೊದಲೇನಲ್ಲ. 2016ರಲ್ಲಿ, ಗೂಗ್ಲ್ ಮ್ಯಾಪ್‌ನಲ್ಲಿ ಫೆಲೆಸ್ತೀನ್‌ನ ಜಾಗವನ್ನು ಕೇವಲ ಕೆಲವು ಚುಕ್ಕಿಗಳ ಮೂಲಕ ಸೂಚಿಸಲಾಗಿದ್ದು ಫೆಲೆಸ್ತೀನ್ ಎಂಬ ಹೆಸರಿನ ಪ್ರಸ್ತಾಪವೇ ಇಲ್ಲ ಎಂಬುದನ್ನು ಕೆಲವರು ಗಮನಿಸಿದರು. ಈ ರೀತಿ ನಿಮ್ಮ ಮ್ಯಾಪ್‌ನಿಂದ ಫೆಲೆಸ್ತೀನ್‌ನ ಹೆಸರನ್ನು ಅಳಿಸಿ ಹಾಕಲು ಕಾರಣವೇನು? ಎಂದು ಅವರು ಗೂಗ್ಲ್ ಕಂಪೆನಿಯವರೊಡನೆ ವಿಚಾರಿಸತೊಡಗಿದರು. ಈ ರೀತಿ ವಿಚಾರಿಸುವವರ ಸಂಖ್ಯೆ ಹೆಚ್ಚಾದಾಗ ಗೂಗ್ಲ್ ಕಂಪೆನಿಯವರು ನೀಡಿದ ಉತ್ತರ ಹೀಗಿತ್ತು. ‘‘ನಾವು ಫೆಲೆಸ್ತೀನ್‌ನ ಹೆಸರನ್ನು ಅಳಿಸಿಹಾಕಿಲ್ಲ. ನಿಜವಾಗಿ ಹಿಂದೆಂದೂ ನಾವು ನಮ್ಮ ಮ್ಯಾಪ್‌ನಲ್ಲಿ ಫೆಲೆಸ್ತೀನ್‌ನ ಹೆಸರನ್ನು ಬಳಸಿದ್ದೇ ಇಲ್ಲ.’’

ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ ಇಸ್ರೇಲ್ ಸಹಿತ 138 ರಾಷ್ಟ್ರಗಳು ಫೆಲೆಸ್ತೀನ್‌ಗೆ ಮಾನ್ಯತೆ ನೀಡಿದ ಬಳಿಕವೂ ಗೂಗ್ಲ್ ಮಾತ್ರ ಫೆಲೆಸ್ತೀನ್‌ಗೆ ಮಾನ್ಯತೆ ನೀಡಲು ತಯಾರಿಲ್ಲ. ಅಂದರೆ ಇಸ್ರೇಲ್ ಅನ್ನು ಮೆಚ್ಚಿಸುವ ಆವೇಶದಲ್ಲಿ ಗೂಗ್ಲ್ ಸಾಕ್ಷಾತ್ ಇಸ್ರೇಲ್‌ನ ಧೋರಣೆಯನ್ನೂ ವಿುೀರಿ ಒಂದು ಹೆಜ್ಜೆ ಮುಂದಕ್ಕಿಟ್ಟಿದೆ.

ಗೂಗ್ಲ್‌ನ ಈ ಪಕ್ಷಪಾತಿ ಧೋರಣೆಯ ಬಗ್ಗೆ ನೆಟ್ಟಿಗರ ಒಂದು ದೊಡ್ಡ ವರ್ಗದಲ್ಲಿ ತೀವ್ರ ಆಕ್ರೋಶವಿದೆ. 2016ರಲ್ಲಿ ಪ್ರಖ್ಯಾತ (change.org) ಸಂಘಟನೆಯವರು "Google! Put Palestine On Your Maps!"  (ಗೂಗ್ಲ್‌ನವರೇ ! ಫೆಲೆಸ್ತೀನ್ ಅನ್ನು ನಿಮ್ಮ ಮ್ಯಾಪ್‌ನಲ್ಲಿ ಸೇರಿಸಿ) ಎಂದು ಆಗ್ರಹಿಸುವ ಒಂದು ಅಭಿಯಾನವನ್ನು ಆರಂಭಿಸಿದಾಗ 22 ಲಕ್ಷಕ್ಕೂ ಹೆಚ್ಚಿನ ಜನ ಈ ಅಭಿಯಾನದ ಪರ ಸಹಿ ಮಾಡಿ ಇದಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.

ಮಾಧ್ಯಮ ಸಂಕೀರ್ಣಕ್ಕೆ ಪ್ರಜಾಸತ್ತಾತ್ಮಕ ಬಾಂಬ್

ಮಧ್ಯ ಪ್ರಾಚ್ಯದ ‘ಏಕಮಾತ್ರ ಪ್ರಜಾಸತ್ತಾತ್ಮಕ ಸರಕಾರ’ ಎಂದು ವೈಭವೀಕರಿಸಲಾಗುವ ಇಸ್ರೇಲ್ ಸರಕಾರವು ಮಾಧ್ಯಮಗಳ ಬಗ್ಗೆ ತನಗಿರುವ ಅಪಾರ ಪ್ರೀತ್ಯಾದರಗಳನ್ನು ಈ ಬಾರಿ ಮೇ 15 ರಂದು ಮತ್ತೆ ಪ್ರದರ್ಶಿಸಿತು. ಗಾಝಾದಲ್ಲಿ ಎಸೋಸಿಯೇಟೆಡ್ ಪ್ರೆಸ್, ಅಲ್ ಜಝೀರಾ ಮುಂತಾದ ಹಲವು ಖ್ಯಾತ ಅಂತರ್‌ರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಕಚೇರಿಗಳಿದ್ದ ಕಟ್ಟಡದ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ ಇಸ್ರೇಲಿ ವಾಯು ಪಡೆ, ಆ ಕಟ್ಟಡವನ್ನು ಸಂಪೂರ್ಣ ಧ್ವಂಸಗೊಳಿಸಿ ಧೂಳಾಗಿ ಪರಿವರ್ತಿಸಿತು. ಇದು ಒಂದು ಯುದ್ಧದ ಮಧ್ಯೆ ಆಕಸ್ಮಿಕವಾಗಿ ಸಂಭವಿಸಿದ ದುರಂತವಾಗಿರಲಿಲ್ಲ. ಮುಂದಿನ ಒಂದು ಗಂಟೆಯ ಅವಧಿಯಲ್ಲಿ ನಿಮ್ಮ ಕಟ್ಟಡವನ್ನು ಗುರಿ ಮಾಡಿ ಬಾಂಬ್ ದಾಳಿ ನಡೆಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿ, ಒಂದು ಗಂಟೆಯ ಬಳಿಕ ಈ ದಾಳಿ ನಡೆಸಲಾಗಿತ್ತು. ‘ಅಲ್ ಜಲಾ ಟವರ್’ ಎಂಬ 11 ಅಂತಸ್ತುಗಳ ಈ ಬೃಹತ್ ಕಟ್ಟಡದಲ್ಲಿ 20ಕ್ಕಿಂತಲೂ ಹೆಚ್ಚಿನ ಮಾಧ್ಯಮ ಸಂಸ್ಥೆಗಳ ಕಚೇರಿಗಳು ಮಾತ್ರವಲ್ಲದೆ ಅವುಗಳಲ್ಲಿ ಕೆಲಸ ಮಾಡುವವರ ಕುಟುಂಬಗಳು ವಾಸವಿದ್ದ 60 ನಿವಾಸಗಳೂ ಇದ್ದವು. ಎಸೋಸಿಯೇಟೆಡ್ ಪ್ರೆಸ್‌ನ ಅಮೆರಿಕನ್ ಸಿಬ್ಬಂದಿ ಅಲ್ಲಿ ಇಲ್ಲದೆ ಇದ್ದಿದ್ದರೆ ಖಂಡಿತವಾಗಿಯೂ ಪ್ರಸ್ತುತ ಒಂದು ಗಂಟೆಯ ಮುನ್ನೆಚ್ಚರಿಕೆ ಸಿಗುವ ಸಾಧ್ಯತೆಯೂ ಇರಲಿಲ್ಲ. ಅಮೆರಿಕ ಸರಕಾರ ತನ್ನ ಒಬ್ಬ ಪ್ರಜೆಯ ಜೀವವು ಏಶ್ಯ ಅಥವಾ ಆಫ್ರಿಕಾದ ಸಾವಿರಾರು ಜೀವಗಳಿಗಿಂತ ಅಮೂಲ್ಯ ಎಂದು ಪರಿಗಣಿಸುವುದರಿಂದ, ಇಸ್ರೇಲ್ ಸರಕಾರವು ತನ್ನ ತಲೆಯ ಮೇಲೆ ಅಮೆರಿಕನ್ ಪ್ರಜೆಗಳ ಹತ್ಯೆಯ ಪಾಪ ಬೇಡವೆಂದು ಆ ರೀತಿ ಮುನ್ನೆಚ್ಚರಿಕೆ ನೀಡಿರಬೇಕು. ಇನ್ನು ಇದು, ಇಸ್ರೇಲ್ ಸರಕಾರವು ಮಾಧ್ಯಮ ಕಚೇರಿಗಳನ್ನೇ ಗುರಿಯಿಟ್ಟು ನಡೆಸಿದ ಮೊದಲ ದಾಳಿಯೂ ಆಗಿರಲಿಲ್ಲ. ಮಾಧ್ಯಮದವರನ್ನೇ ಗುರಿಯಾಗಿಸಿ ಬಾಂಬ್ ದಾಳಿ ನಡೆಸುವ ಒಂದು ದೀರ್ಘ ಇತಿಹಾಸವೇ ಇಸ್ರೇಲ್‌ನ ಹಿಂದಿದೆ. ಈ ಬಾರಿ ಮೇ 11 ಮತ್ತು 12 ರಂದು ಇಸ್ರೇಲ್ ಯುದ್ಧ ವಿಮಾನಗಳು ಗಾಝಾದಲ್ಲಿ ಹತ್ತಾರು ಮಾಧ್ಯಮ ಕಚೇರಿಗಳಿರುವ ಅಲ್ ಜೊಹರ ಮತ್ತು ಅಲ್ ಶುರೂಕ್ ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು. 2012 ನವೆಂಬರ್ ತಿಂಗಳಲ್ಲಿ ಇದೇ ಇಸ್ರೇಲ್ ಸರಕಾರವು, ವಿವಿಧ ಮಾಧ್ಯಮ ಸಂಸ್ಥೆಗಳ ಕಚೇರಿಗಳಿದ್ದ ಗಾಝಾದ ಎರಡು ಕಟ್ಟಡಗಳ ಮೇಲೆ ಬಾಂಬ್ ಸುರಿದು ಅವುಗಳನ್ನು ನಾಶ ಮಾಡಿತ್ತು.

ಫೇಸ್‌ಬುಕ್, ಟ್ವಿಟರ್ ಮತ್ತು  ಇನ್‌ಸ್ಟಾಗ್ರಾಮ್ ಗಳ ಪ್ರಶ್ನಾರ್ಹ ಸೆನ್ಸಾರ್ ನೀತಿ

 ಇಸ್ರೇಲ್‌ನ ಆಕ್ರಮಿತ ಪ್ರದೇಶಗಳ ಸಂತ್ರಸ್ತ ನಾಗರಿಕರ ವಿವಿಧ ಹಕ್ಕುಗಳಿಗಾಗಿ ಇಸ್ರೇಲ್‌ನ ಒಳಗೂ ಹೊರಗೂ ಹೋರಾಡುತ್ತಿರುವ ವಿವಿಧ ಸಂಸ್ಥೆಗಳು ಗೂಗ್ಲ್ ಮಾತ್ರವಲ್ಲದೆ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲ ತಾಣಗಳ ಪಕ್ಷಪಾತಿ ಸೆನ್ಸಾರ್ ನೀತಿಯನ್ನು ಬಹುಕಾಲದಿಂದ ಖಂಡಿಸುತ್ತಾ ಬಂದಿವೆ. ಇತ್ತೀಚೆಗೆ ಈ ಆನ್‌ಲೈನ್ ವೇದಿಕೆಗಳ ಪಕ್ಷಪಾತ ನೀತಿ ಹೆಚ್ಚುತ್ತಾ ಹೋದಂತೆ, ವಿರೋಧವೂ ಹೆಚ್ಚು ತೀವ್ರವಾಗುತ್ತಿದೆ. ಪ್ರಸ್ತುತ ವೇದಿಕೆಗಳು ತಮ್ಮ ಗ್ರಾಹಕರ ಕಡೆಯಿಂದ ದೂರು ಅಥವಾ ಬೇಡಿಕೆಗಳು ಬರುವುದಕ್ಕೆ ಕಾಯದೆ, ಸ್ವಪ್ರೇರಣೆಯಿಂದ ತಮ್ಮ ತಂತ್ರಜ್ಞಾನವನ್ನು ಬಳಸಿ ಇಸ್ರೇಲ್ ಗೆ ಪ್ರತಿಕೂಲವಾದ ಹಾಗೂ ಫೆಲೆಸ್ತೀನ್ ಜನತೆಯ ಆಕ್ರಂದನವನ್ನು ಜಗತ್ತಿಗೆ ತಲುಪಿಸಿ ಅವರ ಪರವಾಗಿ ಜಾಗತಿಕ ಜನಾಭಿಪ್ರಾಯ ರೂಪಿಸಬಹುದಾದ ವರದಿ, ಸಂದರ್ಶನ, ಲೇಖನ, ಚಿತ್ರ ಇತ್ಯಾದಿಗಳನ್ನು ಗುರುತಿಸಿ ಅವುಗಳನ್ನು ಕಿತ್ತು ಹಾಕುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದೇ ವೇಳೆ, ಇಸ್ರೇಲ್ ಪರ ಗುಂಪುಗಳು, ತಮ್ಮ ಬೃಹತ್ ಟ್ರೋಲ್ ಪಡೆಗಳ ಮೂಲಕ, ಇಸ್ರೇಲ್‌ಗೆ ಅಪಥ್ಯವಾದ ಪೋಸ್ಟ್‌ಗಳನ್ನು ಮತ್ತು ಅವುಗಳ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಿ ದೊಡ್ಡ ಸಂಖ್ಯೆಯಲ್ಲಿ ಅವರ ವಿರುದ್ಧ ‘ರಿಪೋರ್ಟ್’ ಮಾಡಿಸುವ ಸಂಘಟಿತ ಅಭಿಯಾನವನ್ನು ನಡೆಸುತ್ತಿವೆ. ಮೊದಲೇ ಫೆಲೆಸ್ತೀನಿಗಳ ಕೈಯಲ್ಲಿ ಜಾಗತಿಕ ಮಟ್ಟದ ಯಾವುದೇ ಬಲಿಷ್ಠ ಮಾಧ್ಯಮ ಇಲ್ಲ. ಸಾಲದ್ದಕ್ಕೆ ಪಕ್ಷಪಾತಿ ಮಾಧ್ಯಮಗಳು ಅವರನ್ನು ಸಂಪೂರ್ಣ ವಿಕೃತ ರೂಪದಲ್ಲಿ ಚಿತ್ರಿಸುವ ವ್ಯಾಪಕ ಅಭಿಯಾನಗಳನ್ನು ನಡೆಸುತ್ತಿವೆ. ಇದೀಗ ಸಾಮಾಜಿಕ ಮಾಧ್ಯಮಗಳು ಕೂಡಾ ತಮ್ಮ ಪಾಲಿಗೆ ಬಾಗಿಲು ಮುಚ್ಚುತ್ತಿರುವುದನ್ನು ಕಂಡು ಅವರು ನಿರಾಶರಾಗುತ್ತಿದ್ದಾರೆ.

(ಮುಂದುವರಿಯುವುದು)

Writer - ಎ.ಎಸ್.ಪುತ್ತಿಗೆ

contributor

Editor - ಎ.ಎಸ್.ಪುತ್ತಿಗೆ

contributor

Similar News