ನೂತನ ಕೃಷಿ ನೀತಿಗಳನ್ನು ಹಿಮ್ಮೆಟ್ಟಿಸುವುದು ದೊರೆಸ್ವಾಮಿ ಆಶಯವಾಗಿತ್ತು: ಪ್ರಕಾಶ್ ಕಮ್ಮರಡಿ
ಬೆಂಗಳೂರು, ಮೇ 29: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ನೀತಿಗಳನ್ನು ಹಿಮ್ಮೆಟ್ಟಿಸುವುದು, ರೈತ ಸಂಘಟನೆಗಳನ್ನು ಒಗ್ಗೂಡಿಸುವುದು ಹಾಗೂ ಭೂ ರಹಿತರಿಗೆ ಭೂಮಿ ಒದಗಿಸುವುದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯ ಆಶಯವಾಗಿತ್ತು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.
ಶನಿವಾರ ಸಮಾಜವಾದಿ ಅಧ್ಯಯನ ಕೇಂದ್ರ ವತಿಯಿಂದ ‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ: ನೆನೆಪು ಮತ್ತು ಹೊರಸಿರುವ ಜವಾಬ್ದಾರಿಗಳು’ ಕುರಿತು ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯ ಚಿಂತನೆ ಹಾಗೂ ಅವರು ಹೇಗೆ ಬದುಕಿದ್ದರೂ ಎಂಬುದನ್ನು ನಾವು ಎಚ್.ಎಸ್.ದೊರೆಸ್ವಾಮಿ ಬದುಕಿನ ಮೂಲಕ ತಿಳಿಯುವಂತಹ ಅವಕಾಶ ಸಿಕ್ಕಿತ್ತು. ಅವರ ಆಶಯದಂತೆ ನಾವೆಲ್ಲರೂ ಮುಂದುವರಿಸೋಣವೆಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದಾಗಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಈಗಾಗಲೇ ವ್ಯವಹಾರ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಹೀಗಾಗಿ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ಹಾಗೂ ಭೂ ಸುಧಾರಣೆಗೆ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದಾಗಿ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಈ ಕಾಯ್ದೆಗಳ ವಿರುದ್ಧ ರೈತರು ತೀವ್ರ ಹೋರಾಟ ನಡೆಸಬೇಕೆಂದು ಎಚ್.ಎಸ್.ದೊರೆಸ್ವಾಮಿ ಆಶಯವಾಗಿತ್ತೆಂದು ಅವರು ತಿಳಿಸಿದ್ದಾರೆ.
ರೈತ ನಾಯಕ ಬಡಗಲಪುರ ನಾಗೇಂದ್ರ ಮಾತನಾಡಿ, ನಮ್ಮಲ್ಲಿ ಗಾಂಧಿ ಚಿಂತಕರು ಹೆಚ್ಚಿನದಾಗಿ ಮಡಿವಂತಿಕೆಯವರಾಗಿರುತ್ತಾರೆ. ಆದರೆ, ಹಿರಿಯ ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿ ಮಡಿವಂತಿಕೆಯನ್ನು ಮೀರಿದ್ದರು. ಜನಪರ ಆಶಯವನ್ನಿಟ್ಟುಕೊಂಡು ಯಾರೇ ಹೋರಾಟ ಮಾಡಿದರು ಅವರ ಜೊತೆ ಮುಕ್ತವಾಗಿ ಬೆರೆಯುತ್ತಿದ್ದರು. ಆ ಮೂಲಕ ಗಾಂಧೀಜಿಯವರ ಚಿಂತನೆಯನ್ನು ಎಲ್ಲ ಸಿದ್ಧಾಂತಗಳ ಜೊತೆ ಬೆಸೆಯಲು ಪ್ರಯತ್ನಿಸುತ್ತಿದ್ದರೆಂದು ತಿಳಿಸಿದ್ದಾರೆ.
ರೈತ ನಾಯಕ ಶಾರದಮ್ಮ ಮಾತನಾಡಿ, ಕಳೆದ 30ವರ್ಷಗಳಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಜೊತೆ ನಿಕಟವಾದ ಸಂಪರ್ಕದಲ್ಲಿದ್ದೇನೆ. ಒಬ್ಬ ಹೋರಾಟಗಾರ ಹೇಗಿರಬೇಕೆಂಬುದಕ್ಕೆ ಸಾಕ್ಷಿಪ್ರಜ್ಞೆಯಾಗಿದ್ದರು. ಗಾಂಧೀಜಿಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿ, ನಮ್ಮನ್ನು ಅಗಲಿದ್ದಾರೆ. ಅವರ ಆಶಯವನ್ನು ನಾವೆಲ್ಲರೂ ಮುಂದುವರೆಸೋಣವೆಂದು ತಿಳಿಸಿದ್ದಾರೆ.