×
Ad

ಕೊನೆಯ ಹಂತದಲ್ಲಿ ರೋಗಿಗಳು ಕೋವಿಡ್ ಆಸ್ಪತ್ರೆಗೆ ಬರುವುದರಿಂದ ಹೆಚ್ಚಿನ ಸಾವು: ಸಚಿವ ಸುರೇಶ್ ಕುಮಾರ್

Update: 2021-05-29 23:22 IST

ಚಾಮರಾಜನಗರ, ಮೇ 29: ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗದೇ ಉಸಿರಾಟ ತೊಂದರೆಯಾದಾಗ ಕೋವಿಡ್ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೌಡಹಳ್ಳಿ ಹಾಗೂ ಗುಂಬಳ್ಳಿಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ, ನೆಗಡಿ, ಜ್ವರ, ಮೈಕೈ ನೋವು ಕಾಣಿಸಿಕೊಂಡ ಬಳಿಕ ಕೂಡಲೇ ಕೋವಿಡ್ ಟೆಸ್ಕ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊನೆಯ ಹಂತಕ್ಕೆ ಕೋವಿಡ್ ಆಸ್ಪತ್ರೆಗೆ ದಾಖಲಾದವರೆ ಹೆಚ್ಚಾಗಿ ಮೃತರಾಗುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಆತ್ಮ ಸ್ಥೈರ್ಯ ಇರಲಿ. ಸೋಂಕು ನಿಯಂತ್ರಣಕ್ಕೆ ಧೈರ್ಯವೇ ಮದ್ದು ಎಂದರು.

ಗ್ರಾಮಾಂತರ ಪ್ರದೇಶದ ಜನರು ಮೊದಲಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಸೋಂಕಿನ ಬಗ್ಗೆ ತಿಳಿದುಕೊಳ್ಳಬೇಕು. ಸುಖಾ ಸುಮ್ಮನೆ ಖಾಸಗಿ ಆಸ್ಪತ್ರೆ ಕ್ಲೀನಿಕ್ ಗಳಿಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದು ಪರಿಸ್ಥಿತಿ ಗಂಭೀರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾದ ಬಳಿಕ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಮೊದಲಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ಸೋಂಕಿನ ಬಗ್ಗೆ ಖಚಿತ ಪಡಿಸಿಕೊಳ್ಳಿ ಎಂದರು.

ಶಾಸಕ ಎನ್.ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News