ಮೈಸೂರು: ಪತ್ನಿ ಮೃತಪಟ್ಟು 11ನೇ ದಿನಕ್ಕೆ ಪತಿಯೂ ಕೋವಿಡ್‍ಗೆ ಬಲಿ; ಇಬ್ಬರು ಮಕ್ಕಳು ಅನಾಥ
ಮೈಸೂರು, ಮೇ 30: ಕೋರೋನ ಸೋಂಕಿಗೆ ಒಳಗಾಗಿ ಪತ್ನಿ ಸಾವನ್ನಪ್ಪಿದ 11 ದಿನಗಳ ಬಳಿಕ ಪತಿ ಸಹ ಕೋರೋನ ಸೋಂಕಿನಿಂದ ಮೃತಪಟ್ಟು, ಇಬ್ಬರು ಮಕ್ಕಳು ಅನಾಥರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಗಂಗೋತ್ರಿ ಬಡಾವಣೆ ನಿವಾಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಕೆ.ಸುಷ್ಮಾ (37) ಮೃತಪಟ್ಟವರು. ಇವರ ಸಾವಿನ ಹನ್ನೊಂದನೆ ದಿನ ಇವರ ಪತಿ ಡಿ.ಪ್ರಸನ್ನ(44) ಕೂಡ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಡಿ.ಪ್ರಸನ್ನ ಅವರಿಗೆ ಕೊರೋನ ಸೋಂಕು ತಗಲಿತ್ತು, ನಂತರ ಪತ್ನಿಯಲ್ಲೂ ದೃಢಪಟ್ಟಿತು. ದಂಪತಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದರು. ಆದರೆ ಪತ್ನಿ ಸುಷ್ಮಾ ಆರೋಗ್ಯದಲ್ಲಿ ಏರುಪೇರಾಗಿ ಉಸಿರಾಟಕ್ಕೆ ತೊಂದರೆಯುಂಟಾಗಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೇ16 ರಂದು ಸಾವಿಗೀಡಾಗಿದ್ದರು. ಹನ್ನೊಂದು ದಿನಗಳ ಬಳಿಕ ಪತಿ ಡಿ.ಪ್ರಸನ್ನ ಕೂಡ ಸಾವನ್ನಪ್ಪಿದ್ದಾರೆ.
ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 14 ವರ್ಷದ ಪಿ.ಹರ್ಷ ಹಾಗೂ 12 ವರ್ಷದ ನಯನ ಇಬ್ಬರು ಅನಾಥರಾಗಿದ್ದಾರೆ.