ತೇಜಸ್ವಿ ಸೂರ್ಯನ ಎದೆ ಬಗೆದರೆ ಸಿಗುವುದು ಎರಡಕ್ಷರವಲ್ಲ, ಸುಳ್ಳು, ವಂಚನೆ, ದ್ರೋಹ: ಕಾಂಗ್ರೆಸ್

Update: 2021-05-30 10:23 GMT

ಬೆಂಗಳೂರು, ಮೇ 30: ಜನರು‌ ಪಿಡುಗಿನಿಂದಾಗಿ ಸಾಯುತ್ತಿದ್ದರೆ ಬಿಜೆಪಿ ಲಾಭದ ಬಗ್ಗೆ ಯೋಚಿಸುತ್ತಿದೆ.‌ ಕಾಂಗ್ರೆಸ್ ಜನರ ನೆರವಿಗೆ ಧಾವಿಸುತ್ತಿದೆ. ಬಿಜೆಪಿ ನಾಯಕರು ಆಸ್ಪತ್ರೆಯ ಹಾಸಿಗೆ ಮತ್ತು ಲಸಿಕೆಗಳ ಹಗರಣದಲ್ಲಿ‌ ಬೆತ್ತಲಾಗುತ್ತಿದ್ದರೆ, ಜನರಿಗೆ ನೆರವು ನೀಡಲು ದುಪ್ಪಟ್ಟು ಪ್ರಯತ್ನದೊಂದಿಗೆ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ತಿಳಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಂಸದ ತೇಜಸ್ವಿ ಸೂರ್ಯನ ಎದೆ ಬಗೆದರೆ ಸಿಗುವುದು ಎರಡಕ್ಷರವಲ್ಲ, ಸುಳ್ಳು, ವಂಚನೆ, ದ್ರೋಹ. ಅವರ ಮನೆಯ ಕಪಾಟು ತಡಕಿದರೆ ಸಿಗುವುದು ಬಡವರ ಲಸಿಕೆ ಮಾರಿಕೊಂಡ ಪಾಪದ ಹಣ. ಚಿಕ್ಕಪ್ಪ, ಮಗ ಸೇರಿಕೊಂಡು ಬೆಡ್ ಬ್ಲಾಕಿಂಗ್ ದಂಧೆಯಲ್ಲದೆ ಈಗ ಲಸಿಕೆ ಕಳ್ಳತನದ ದಂಧೆಯನ್ನೂ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

ಕೊರೋನ ಹೆಸರಲ್ಲಿ ಬಿಜೆಪಿ ಹಗರಣಗಳು. ಬೆಡ್ ಬಾಡಿಗೆ ಹಗರಣ, ಪಿಎಂ ಕೇರ್ಸ್ ಹಗರಣ, ವೈದ್ಯಕೀಯ ಉಪಕರಣ ಖರೀದಿ ಹಗರಣ, ಫುಡ್ ಕಿಟ್ ಹಗರಣ, ಬೆಡ್ ಬ್ಲಾಕಿಂಗ್ ಹಗರಣ, ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ #BJPVaccineScam ಎಂದು ಕಾಂಗ್ರೆಸ್ ಟೀಕಿಸಿದೆ.

ಲಸಿಕೆ ಬಗ್ಗೆ ಕರ್ನಾಟಕ ಸರ್ಕಾರದಿಂದ ಯಾವುದೇ ವಿಚಾರಗಳು ಕೇಳಿ ಬರುತ್ತಿಲ್ಲ. ಸರ್ಕಾರ ಯಾವಾಗ ಮತ್ತು ಎಷ್ಟು ಜನರಿಗೆ ಲಸಿಕೆ ಹಾಕಲು ನಿರ್ಧರಿಸಿದೆ ಎಂಬುವುದು ಕೂಡ ತಿಳಿಯುತ್ತಿಲ್ಲ. ಆಮೆಗತಿಯ ಸರ್ಕಾರದ ಆಡಳಿತವನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಸರ್ಕಾರವಿನ್ನು ಇದೆಯೇ ಎಂದು ಎನಿಸುತ್ತದೆ ಎಂದು ಕಿಡಿಕಾರಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಹಂ, ನಿರ್ಲಕ್ಷ್ಯ, ಬೌದ್ಧಿಕ ದಿವಾಳಿತನವೇ ಇಂದಿನ ಅಧೋಗತಿಗೆ ಕಾರಣ, ಇದನ್ನು ನಾವು ಹೇಳಿದಾಗ ರಾಜಕೀಯ ದುರುದ್ದೇಶ, ಟೂಲ್ ಕಿಟ್ ಎಂಬ ಮಾತಾಡುತ್ತಿದ್ದರು ಬಿಜೆಪಿಗರು. ಈಗ ಸ್ವತಃ ದೇಶದ ವಿತ್ತ ಸಚಿವೆಯ ಪತಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಅವರೇ ಮೋದಿ ಜಾತಕ ಬಿಚ್ಚಿಟ್ಟಿದ್ದಾರೆ ಇದಕ್ಕೇನಂತೀರಿ ಎಂದು ಪ್ರಶ್ನಿಸಿದೆ.

ನರೇಂದ್ರ ಮೋದಿಯ ಏಳು ವರ್ಷಗಳ ಆಳ್ವಿಕೆಯಲ್ಲಿ ಭಾರತ ಕಂಡಿದ್ದು ಆರ್ಥಿಕ ಕುಸಿತ, ನಿರುದ್ಯೋಗ ಪರ್ವ, ಪ್ರಜಾಪ್ರಭುತ್ವದ ಅಣಕ, ರಫೆಲ್, ಕೊರೋನ, ಪಿಎಂ ಕೇರ್ಸ್‌ನಂತಹ ಸಾವಿರಾರು ಕೋಟಿಗಳ ಭ್ರಷ್ಟಾಚಾರ. ಪತ್ರಿಕಾ ಸ್ವತಂತ್ರ, ನಾಗರಿಕ ಹಕ್ಕುಗಳ ದಮನ, ಕರಾಳ ಕಾಯ್ದೆಗಳು, ಬೆಲೆ ಏರಿಕೆಯ ಪ್ರಹಾರ, ಭರಪೂರ ಸುಳ್ಳುಗಳು #7yearsOfModiMadeDisaster ಎಂದು ಟೀಕಿಸಿದೆ.

ಜಿಡಿಪಿ ಐತಿಹಾಸಿಕ ಕುಸಿತ, ಆರ್ಥಿಕತೆ -23ಕ್ಕೆ ಕುಸಿತ, ನಿರುದ್ಯೋಗ 45 ವರ್ಷಗಳಲ್ಲೇ ಗರಿಷ್ಠ, ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಹೊರಕ್ಕೆ, ಬಾಂಗ್ಲಾಕ್ಕಿಂತಲೂ ಕಳಪೆ ಆರ್ಥಿಕತೆ, ಕೊರೋನದಲ್ಲಿ ನಂ1, ಅಂತರ್ರಾಷ್ಟ್ರೀಯ ಸಂಬಂಧಗಳ ಕುಸಿತ, ದೇಶದ ಸಾಲ ಅತೀ ಗರಿಷ್ಠ ಮಟ್ಟಕ್ಕೆ, ದೇಶದ ಗೌರವ ಮಣ್ಣುಪಾಲು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News