ಕೊರೋನ ನಿರ್ಮೂಲನೆಗಾಗಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ: ಬಿಜೆಪಿ ಮುಖಂಡರ ವಿರುದ್ಧ ಎಫ್‍ಐಆರ್

Update: 2021-05-30 10:29 GMT

ಬೆಳಗಾವಿ, ಮೇ.30: ಕೋವಿಡ್ ಸೋಂಕಿನ ನಿರ್ಮೂಲನೆಗಾಗಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ, ಹವನ ಮಾಡಿದ್ದ ಆರೋಪದಡಿ ಬಿಜೆಪಿ ಮುಖಂಡರ ವಿರುದ್ಧ ಇಲ್ಲಿನ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಬೆಳಗಾವಿಯ ಬಿಜೆಪಿ ಮುಖಂಡರಾದ ಗಿರೀಶ್, ಜಯಂತ್ ಜಾಧವ್, ಕಲ್ಲಪ್ಪ ಶಹಾಪುರಕರ್ ಹಾಗೂ ಸುನೀಲ್ ಮುತಗೇಕರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಮೇ.24 ರಂದು ಬೆಳಗಾವಿಯ ಬಸವನ ಗಲ್ಲಿ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರು ದೂರು ನೀಡಿದ್ದರು. ಈ ದೂರು ಆಧರಿಸಿ ನಾಲ್ವರ ವಿರುದ್ಧ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಪೊಲೀಸರು ಎಫ್‍ಐಆರ್ ನಲ್ಲಿ ಶಾಸಕ ಅಭಯ್ ಪಾಟೀಲ್‍ ಹೆಸರು ಕೈಬಿಟ್ಟಿದ್ದಾರೆ. 

'ಹೋಮದಿಂದ ಕೊರೋನ ಹೋದರೆ ಸ್ವಾಗತ'
ಹೋಮ, ಹವನದಿಂದ ಕೋವಿಡ್ ಕಡಿಮೆ ಆಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲಿ. ಆಗ ನಾವು ಸ್ವಾಗತಿಸುತ್ತೇವೆ. ಅಷ್ಟೇ ಅಲ್ಲದೆ, ಈ ರೀತಿ ಕಡಿಮೆಯಾದರೆ, ಕಾಂಗ್ರೆಸ್ ಪಕ್ಷದಿಂದಲೇ ಅವರನ್ನು ಸನ್ಮಾನಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News