ಭದ್ರಾವತಿ: ನಗರಸಭೆ ಗುತ್ತಿಗೆ ನೌಕರನ ಕೊಲೆ ಪ್ರಕರಣ; ಐವರು ಆರೋಪಿಗಳ ಬಂಧನ

Update: 2021-05-30 11:46 GMT

ಶಿವಮೊಗ್ಗ, ಮೇ 30: ಕ್ಷುಲ್ಲಕ ಕಾರಣಕ್ಕೆ ನಗರಸಭೆ ಗುತ್ತಿಗೆ ನೌಕರನ ಕೊಲೆ ಮಾಡಿದ ಪ್ರಕರಣ ಸಂಬಂಧ ರವಿವಾರ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಭದ್ರಾವತಿಯ ಅನ್ವರ್ ಕಾಲನಿ ನಿವಾಸಿ ಸಾಬಿತ್ (20), ಶಿವಮೊಗ್ಗದ ಆರ್.ಎಂ.ಎಲ್ ನಗರ ನಿವಾಸಿಗಳಾದ ಹಿದಾಯತ್ (20), ಮುಹಮ್ಮದ್ ಜುನೈದ್ (20), ಬುದ್ಧನಗರ ನಿವಾಸಿಗಳಾದ ನಿಶಾದ್ ಪಾಷಾ (21), ತಬ್ರೇಜ್ ಪಾಷಾ (21) ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಘಟನೆಯ ವಿವರ: ನಿಶಾದ್ ಪಾಷಾ ಮತ್ತು ಮುಹಮ್ಮದ್ ಜುನೈದ್ ಮಂಗಳವಾರ ಸಂಜೆ ಜೈಭೀಮ್ ನಗರ ಅಂಗಡಿಯೊಂದಕ್ಕೆ ಗುಟ್ಕಾ ಖರೀದಿಸುವುದಕ್ಕಾಗಿ ಬೈಕ್‌ನಲ್ಲಿ ಬಂದಿದ್ದರು. ಈ ವೇಳೆ, ಲಾಕ್‌ಡೌನ್ ಇರುವುದರಿಂದ ಓಡಾಡಬೇಡಿ, ಪೊಲೀಸರು ನೋಡಿದರೆ ಬೈಯುತ್ತಾರೆ ಎಂದು ನಗರಸಭೆ ಗುತ್ತಿಗೆ ನೌಕರರಾದ ಸುನೀಲ್ ಮತ್ತು ಶ್ರೀಕಂಠ ಸಲಹೆ ನೀಡಿದ್ದಾರೆ.

ಈ ಸಂದರ್ಭ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ನಿಶಾದ್ ತಮ್ಮ ಸ್ನೇಹಿತರಿಗೆ ಫೋನ್ ಮಾಡಿ ಕರೆದಿದ್ದಾನೆ. ಬೈಕ್‌ನಲ್ಲಿ ಬಂದವರೇ ಸುನೀಲ್‌ಗೆ ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಚಾಕುವಿನಿಂದ ಸುನೀಲ್ ಬೆನ್ನಿಗೆ ಚುಚ್ಚಿ ಗಾಯಗೊಳಿಸಿದ್ದಾರೆ. ಬಿಡಿಸಲು ಬಂದ ಶ್ರೀಕಂಠನ ಮೇಲೆಯೂ ಹಲ್ಲೆ ಮಾಡಲಾಗಿದೆ. ಈ ಪೈಕಿ ಸುನೀಲ್ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರೆ, ಶ್ರೀಕಂಠ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News