×
Ad

ಸಂಪುಟದಿಂದ ಸಚಿವ ಸಿ.ಪಿ.ಯೋಗೇಶ್ವರ್ ವಜಾ ಮಾಡಲು ಬಿಜೆಪಿ ಶಾಸಕರ ಪಟ್ಟು

Update: 2021-05-30 17:35 IST

ಬೆಂಗಳೂರು, ಮೇ 30: `ನಾಯಕತ್ವ ಬದಲಾವಣೆ' ಪ್ರಯತ್ನಕ್ಕೆ ಮುಂದಾಗಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಯಾವುದೇ ಮುಲಾಜಿಲ್ಲದೆ ಸಚಿವ ಸಂಪುಟದಿಂದ ಕೂಡಲೇ ಕಿತ್ತುಹಾಕಬೇಕೆಂದು ಕೋರಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದ 18 ಮಂದಿ ಬಿಜೆಪಿ ಶಾಸಕರ ತಂಡ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದೆ.

ರವಿವಾರ ಇಲ್ಲಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರಾದ ರಾಜೂಗೌಡ, ಬಸವರಾಜ ದಡೆಸುಗೂರು, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ 18 ಮಂದಿ ಶಾಸಕರು ಸಿಎಂ ಭೇಟಿ ಮಾಡಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತು ಮನೆಯಲ್ಲಿದ್ದ ಸಿ.ಪಿ. ಯೋಗೀಶ್ವರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಿ ಸಚಿವ ಸ್ಥಾನ ನೀಡಲಾಗಿದೆ. ಆದರೂ, ಅವರು ನಿಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕೋರಿದರು ಎಂದು ಗೊತ್ತಾಗಿದೆ.

ವಾರದ ಹಿಂದೆ ಸಚಿವ ಸಿ.ಪಿ.ಯೋಗೇಶ್ವರ್ ಹೊಸದಿಲ್ಲಿ ತೆರಳಿ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದರು. ಆ ಬಳಿಕ ಬೆಂಗಳೂರಿಗೆ ಬಂದು, `ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಶುದ್ಧ ಬಿಜೆಪಿ ಸರಕಾರವಾಗಿ ಉಳಿದಿಲ್ಲ. ರಾಜ್ಯದಲ್ಲಿರುವುದು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯೊಂದಿಗಿನ ಹೊಂದಾಣಿಕೆ ಸರಕಾರ' ಎಂದು ಯೋಗೇಶ್ವರ್ ಬಹಿರಂಗವಾಗಿಯೇ ಟೀಕಿಸಿದ್ದರು.

ಕೊರೋನ ಮಾಹಿತಿ: ಸಿಎಂ ಜೊತೆ ಸಮಾಲೋಚನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, `ಹದಿನೆಂಟು ಮಂದಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ರಾಜ್ಯದಲ್ಲಿನ ಕೊರೋನ ಸೋಂಕು ತೊಲಗಿಸಲು ನಾವು ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ತಿಳಿಸಿದ್ದೇವೆ' ಎಂದು ಹೇಳಿದರು.

'ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಸೊಂಕಿತರಿಗೆ ಆಕ್ಸಿಜನ್, ಬೆಡ್, ಊಟದ ವ್ಯವಸ್ಥೆ, ಸಂಕಷ್ಟದಲ್ಲಿರುವವರಿಗೆ ಪಡಿತರ ಕಿಟ್ ವಿತರಣೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಿಎಂಗೆ ನೀಡಿದ್ದೇವೆ. ಅಲ್ಲದೆ, ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ  ಮಾಹಿತಿ ನೀಡಿದ್ದು, ಗ್ರಾಮೀಣ ಪ್ರದೇಶಕ್ಕೆ ಸೋಂಕು ಹಬ್ಬುವುದನ್ನು ತಡೆಗಟ್ಟಲು ಅಗತ್ಯ ನೆರವು ನೀಡಲು ಸಿಎಂಗೆ ಮನವಿ ಮಾಡಿದ್ದೇವೆ' ಎಂದು ರೇಣುಕಾಚಾರ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News