ಕೋವಿಡ್‍ನಿಂದ ಗುಣಮುಖರಾದವರಲ್ಲಿ ಚೈತನ್ಯ ತುಂಬಲು 'ಆರೋಗ್ಯ ಪುನರ್ ಚೇತನ' ಕಾರ್ಯಕ್ರಮ

Update: 2021-05-30 12:37 GMT

ಕಲಬುರಗಿ, ಮೇ 30: ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ರೋಗಿಗೆ ಜೀವನದಲ್ಲಿ ಮತ್ತೆ ಹೊಸ ಚೈತನ್ಯ ತುಂಬಲು ಕಲಬುರಗಿಯಲ್ಲಿ ರಾಜ್ಯದಲ್ಲಿಯೆ ಪ್ರಥಮವಾಗಿ 'ಆರೋಗ್ಯ ಪುನರ್ ಚೇತನ' ಎಂಬ ಕಾರ್ಯಕ್ರಮ ಜಾರಿಗೊಳಿಸಿ ವಿನೂತನ ಪ್ರಯೋಗಕ್ಕೆ ಕಲಬುರಗಿ ಜಿಲ್ಲಾಡಳಿತ ಕೈಹಾಕಿದೆ.

ಕೋವಿಡ್ ಸೋಂಕಿನಿಂದ ಅಪಾರ ಜೀವ ಹಾನಿಯಾಗಿದ್ದು, ಕೊರೋನ ಸೋಂಕಿಗಿಂತ ಸೋಂಕಿನ ಭಯವೆ ಜಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ಸೋಂಕಿನಿಂದ ಗುಣಮುಖರಾದ ರೋಗಿಯಲ್ಲಿ ಆತ್ಮಸ್ಥೈರ್ಯ, ಆರೋಗ್ಯ ಕಾಳಜಿ, ಯೋಗ, ಧ್ಯಾನದ ಜೊತೆಗೆ ಜೀವನದಲ್ಲಿ ಹೊಸ ಚೈತನ್ಯ ತುಂಬಲು ಕಲಬುರಗಿ ನಗರದ ರಾಮ ಮಂದಿರ-ನಾಗನಹಳ್ಳಿ ರಿಂಗ್ ರೋಡ್ ರಸ್ತೆಯ ನಗರಾಭಿವೃದ್ಧಿ ಪ್ರಾಧಿಕಾರದ ಕಲ್ಯಾಣ ಮಂಟಪದಲ್ಲಿ ಕಲಬುರಗಿ ಜಿಲ್ಲಾಡಳಿತವು ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಯೋಗದೊಂದಿಗೆ 'ಆರೋಗ್ಯ ಪುನರ್ ಚೇತನ' ಕೇಂದ್ರ ತೆರೆದಿದ್ದು, ರವಿವಾರದಿಂದ ಕಾರ್ಯಾರಂಭ ಮಾಡಿದೆ.

ಕೋವಿಡ್ ಸೋಂಕಿನಿಂದ ಮೊದಲ ಸಾವು ಕಂಡು ದೇಶದಲ್ಲಿಯೆ ಸುದ್ದಿಯಾದ ಕಲಬುರಗಿಯಲ್ಲಿ ಇತ್ತೀಚೆಗೆ ಎರಡನೇ ಅಲೆಯಲ್ಲಿ ವಿಪರೀತ ಸೋಂಕು ಏರಿಕೆಯಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಮತ್ತು ಅವರಲ್ಲಿ ಆರೋಗ್ಯ ಕಾಳಜಿ ಹೆಚ್ಚಿಸಲು ಈ ರೀತಿಯ ವಿನೂತನ ಪ್ರಯೋಗಕ್ಕೆ ಕೈಹಾಕಿ ಅನುಷ್ಠಾನಕ್ಕೆ ತಂದಿದ್ದಾರೆ.

ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ಮಾತನಾಡಿ, ಕೋವಿಡ್ ಸೋಂಕಿತರ ಮಾನಸಿಕ ಮತ್ತು ದೈಹಿಕ ಬಲ ಹೆಚ್ಚಿಸಲು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರ ಮಾರ್ಗದರ್ಶನದಲ್ಲಿ ಈ ಕೇಂದ್ರ ತೆರೆಯಲಾಗಿದೆ. ಕೇಂದ್ರ ಕಾರ್ಯನಿರ್ವಹಣೆಯ ಸಂಪೂರ್ಣ ವೆಚ್ಚ ವಿಪತ್ತು ಪರಿಹಾರದಲ್ಲಿ ಭರಿಸಲಾಗುತ್ತದೆ. ತರಬೇತಿಗೆ ಅವಶ್ಯವಿರುವ ಕೆಳ ಹಾಸಿಗೆಗಳನ್ನು ಅಜೀಮ್ ಪ್ರೇಮ್‍ಜಿ ಫೌಂಡೇಷನ್ ಉಚಿತವಾಗಿ ನೀಡಲು ಮುಂದೆ ಬಂದಿದ್ದು, ಕೇಂದ್ರದ ನೋಡೆಲ್ ಅಧಿಕಾರಿ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಅವರ ನಿರ್ದೇಶನದಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಪ್ರತಿದಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗುವವರನ್ನು ಇಲ್ಲಿಗೆ ಕರೆ ತಂದು ಒಂದರಿಂದ ಎರಡು ಗಂಟೆಗಳ ಕಾಲ ಆರೋಗ್ಯ ಕಾಳಜಿ, ಶ್ವಾಸಕೋಶ ಇಮ್ಮಡಿಗೊಳಿಸುವ ಬಗೆ, ಆಹಾರ ಸೇವನೆ, ಧ್ಯಾನ, ಶುಚಿತ್ವದ ಕುರಿತು ತರಬೇತಿ ನೀಡಲಾಗುತ್ತದೆ. ಮಾನಸಿಕ ಒತ್ತಡ ನಿವಾರಣೆಗೆ ಆಪ್ತ ಸಮಾಲೋಚನೆಯೂ ಇಲ್ಲಿ ನಡೆಯಲಿದೆ. ಮಾನಸಿಕ ತೊಂದರೆ ನಿವಾರಣೆಗೆ ಕ್ಲಿನಿಕಲ್ ಸೈಕಾಲಾಜಿಸ್ಟ್ ಇದ್ದಾರೆ. ಆಹಾರ ಸೇವನೆ ಕುರಿತು ಡಯಟಿಶಿಯನ್ ತಿಳಿಸಲಿದ್ದಾರೆ. ಫಿಜಿಯೋಥೆರಾಪಿಸ್ಟ್ ಇಲ್ಲಿ ಲಭ್ಯವಿದ್ದು, ಶ್ವಾಸಕೋಶ ಸುಧಾರಣೆ ನಿಟ್ಟಿನಲ್ಲಿ ಸಲಹೆ ನೀಡಲಿದ್ದಾರೆ. ಇದಕ್ಕಾಗಿ ಡಾ.ರಾಣಿ, ಡಾ. ಸಂಗೀತಾ ಹಾಗೂ ಡಾ.ವಿಜಯ ಅವರನ್ನು ಇಲ್ಲಿಗೆ ನಿಯೋಜಿಸಲಾಗಿದೆ. ಆಸ್ಪತ್ರೆಯಿಂದ ಕೇಂದ್ರಕ್ಕೆ ರೋಗಿಗಳನ್ನು ಕರೆತರುವ ಜವಾಬ್ದಾರಿ ಡಾ.ಬಸಪ್ಪ ಕ್ಯಾತನಾಳ ಅವರಿಗೆ ವಹಿಸಲಾಗಿದೆ.

ಒಟ್ಟಿನಲ್ಲಿ ಸೋಂಕಿನಿಂದ ಗುಣಮುಖರಾದರು ಆತಂಕ ಮನೆ ಮಾಡಿರುವ ರೋಗಿಗಳಲ್ಲಿ ಎಲ್ಲ ರೀತಿಯ ಬದುಕಿನ ಭರವಸೆ ಇಮ್ಮಡಿಗೊಳಿಸಲಾಗುತ್ತದೆ. ತರಬೇತಿ ಕೊನೆಗೆ ಶ್ವಾಸಕೋಶ ಹೆಚ್ಚಿಸುವ ಸ್ಪೈರೋಮೀಟರ್, ಡ್ರೈ ಫ್ರೂಟ್ಸ್ ಹಾಗೂ ಹಣ್ಣುಗಳನ್ನು ನೀಡಿ ಕಳುಹಿಸಲಾಗುತ್ತದೆ ಎಂದು ಕೇಂದ್ರ ಕಾರ್ಯನಿರ್ವಹಣೆ ಬಗ್ಗೆ ಅವರು ವಿವರಿಸಿದರು.

ಧ್ಯಾನ, ಯೋಗಾಸನ ಮತ್ತು ನೃತ್ಯ: ರವಿಶಂಕರ ಗುರೂಜಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಂಪೂರ್ಣ ಸಹಯೋಗ ಇಲ್ಲಿರುವುದರಿಂದ ಸೋಂಕಿನಿಂದ ಗುಣಮುಖರಾದವರಿಗೆ ಸಂಸ್ಥೆಯ ಡಾ.ಕವಿರಾಜ್ ಎಂ. ನೇತೃತ್ವದಲ್ಲಿ ಶಿಕ್ಷಕರಾದ ಗೀತಾ, ವಿಕಾಸ, ಅಶ್ವಿನಿ, ನಿಂಗರಾಜ, ಕಿಶೋರ ಅವರು ಸೋಂಕಿನಿಂದ ಹೊರ ಬಂದವರಿಗೆ ಯೋಗ, ಧ್ಯಾನ, ವ್ಯಾಯಾಮ ಹೇಳಿಕೊಡುವುದಲ್ಲದೆ ಅವರ ಮನೋಲ್ಲಾಸಕ್ಕಾಗಿ ನೃತ್ಯವನ್ನು ಕಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News