ಬಿಜೆಪಿಗೆ ನೀಡಿದ ಅಧಿಕಾರ 'ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ': ಡಾ.ಎಚ್.ಸಿ.ಮಹದೇವಪ್ಪ ಲೇವಡಿ

Update: 2021-05-30 12:57 GMT

ಬೆಂಗಳೂರು, ಮೇ 30: `ಅಧಿಕಾರವೆಂಬುದು ಕೇವಲ ಮುಂದಿನ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಇರುವ ಅಸ್ತ್ರವೆಂದೇ ನಂಬಿಕೊಂಡು ಇಲ್ಲದ ಹುಚ್ಚಾಟ ಮಾಡುತ್ತಾ ಜನರ ಬದುಕು ಮತ್ತು ಭವಿಷ್ಯವನ್ನು ನಾಶಮಾಡುತ್ತಿರುವ ಕೋಮುವಾದಿ ಬಿಜೆಪಿ ಸರಕಾರದ ಕೈಗೆ ಕೊಟ್ಟ ಅಧಿಕಾರವು 'ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ'! ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಪಕ್ಷದ ರಾಜಕೀಯ ಏಳಿಗೆಗಾಗಿ ಬಳಸಿಕೊಳ್ಳುವ ಭರದಲ್ಲಿ ಜನ ಸಾಮಾನ್ಯರ ನಂಬಿಕೆಯನ್ನು ಹಾಳು ಮಾಡುತ್ತಿರುವ ಕೇಂದ್ರ ಸರಕಾರವು ಹೋರಾಟದ ಮೂಲಕ ಪಡೆದುಕೊಂಡ ಸ್ವತಂತ್ರ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಶನಿಯಂತೆ ಒಕ್ಕರಿಸಿದೆ!' ಎಂದು ಲೇವಡಿ ಮಾಡಿದ್ದಾರೆ.

'ಜಿಡಿಪಿಯ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡು, ದೇಶದ ಎಲ್ಲ ಉತ್ಪಾದಕ ವಲಯಗಳು ತತ್ತರಿಸಿ ಹೋದವು. ಇದರ ಪರಿಣಾಮ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರ ಬೀಳುವಂತಾಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ ಎಂದು ಕಾಣುತ್ತದೆ!' ಎಂದು ಡಾ.ಮಹದೇವಪ್ಪ ಇದೇ ವೇಳೆ ಟೀಕಿಸಿದ್ದಾರೆ.

`ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಅಸ್ತಿತ್ವಕ್ಕೆ ಬಂದು 7 ವರ್ಷಗಳು ಪೂರೈಸಿದ ಸಂಭ್ರಮದಲ್ಲಿದೆ. ಕೇಂದ್ರ ಸರಕಾರದ ದಯನೀಯ ಆಡಳಿತ ವೈಫಲ್ಯದ ಈ ವೇಳೆ ಈ ಸಂಭ್ರಮ ಯಾವ ಕಾರಣಕ್ಕೆಂದು ಸ್ವತಃ ರಾಜ್ಯ ಬಿಜೆಪಿ ಪಕ್ಷದ ಕಾರ್ಯಕರ್ತರಿಗೇ ಗೊತ್ತಿಲ್ಲ!' ಎಂದು ಡಾ.ಎಚ್.ಸಿ.ಮಹದೇವಪ್ಪ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News