ಕೋವಿಡ್ ಲಸಿಕಾ ಅಭಿಯಾನದಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ.1: ಸಚಿವ ಡಾ.ಕೆ.ಸುಧಾಕರ್

Update: 2021-05-30 15:04 GMT

ಬೆಂಗಳೂರು, ಮೇ 30: ಎಲ್ಲರಿಗೂ ಶೀಘ್ರವಾಗಿ ಕೋವಿಡ್ ಲಸಿಕೆ ನೀಡುವುದು ನಮ್ಮ ಮುಂದಿರುವ ಸದ್ಯದ ಗುರಿಯಾಗಿದೆ. ಅಲ್ಲಿಯವರೆಗೆ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮ ಕಡೆಗಣಿಸಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆಯದೇ ಇದ್ದಲ್ಲಿ ಈ ರೀತಿ ಮೂರು, ನಾಲ್ಕನೇ ಅಲೆ ಬರುವ ಸಾಧ್ಯತೆ ಇರುತ್ತದೆ. ಆದಷ್ಟು ಶೀಘ್ರ ಎಲ್ಲರಿಗೂ ಲಸಿಕೆ ನೀಡಲು ಪ್ರಯತ್ನ ನಡೆಸಲಾಗುತ್ತಿದೆ. ಮಕ್ಕಳಿಗೂ ಲಸಿಕೆ ನೀಡಲು ಪ್ರಯೋಗ ನಡೆಯುತ್ತಿದೆ. ವೃದ್ಧರಿಗೆ, ಯುವಜನರಿಗೆ, ಹೆಚ್ಚು ಜನರ ಸಂಪರ್ಕ ನೀಡುವವರಿಗೆ ಮೊದಲಾದವರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಎರಡು ಡೋಸ್ ಪಡೆದವರು ಇಡೀ ಪ್ರಕ್ರಿಯೆ ಮುಗಿಯುವವರೆಗೆ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕು. ಇನ್ನೂ 6 ತಿಂಗಳು ಅಥವಾ ಒಂದು ವರ್ಷ ಮಾಸ್ಕ್ ಧರಿಸುವ ಹಾಗೂ ಇತರೆ ಕೋವಿಡ್ ಸುರಕ್ಷತಾ ಕ್ರಮ ಕಡೆಗಣಿಸಬಾರದು ಎಂದು ಅವರು ಜನತೆಯಲ್ಲಿ ಕೋರಿದ್ದಾರೆ.

ರಾಜ್ಯಗಳ ಬೇಡಿಕೆಗನುಗುಣವಾಗಿ ರೆಮ್ಡಿಸಿವಿರ್ ಔಷಧಿಯನ್ನು ಕೇಂದ್ರ ಸರಕಾರ ಹಂಚಿಕೆ ಮಾಡುತ್ತಿತ್ತು. ಈಗ ಕೆಲ ಕಂಪನಿಗಳು ಮುಂದೆ ಬಂದು ರಾಜ್ಯಕ್ಕೆ ಔಷಧಿ ನೀಡುವುದಾಗಿ ತಿಳಿಸಿವೆ. ಮಾರುಕಟ್ಟೆಯಲ್ಲಿ ಔಷಧಿ ಲಭ್ಯವಿರುವುದರಿಂದಲೇ ಕೇಂದ್ರ ಸರಕಾರ ನೇರವಾಗಿ ಖರೀದಿಸಲು ರಾಜ್ಯಕ್ಕೆ ಸೂಚನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. 

ಲಾಕ್‍ಡೌನ್‍ನಿಂದ ಏನೆಲ್ಲ ಉತ್ತಮವಾಗಿದೆ ಎಂಬುದನ್ನು ಜನರೇ ನೋಡಿದ್ದಾರೆ. ಪಾಸಿಟಿವಿಟಿ ದರ ಶೇ.47 ರಷ್ಟಿದ್ದು, ಕಳೆದ 15 ದಿನಗಳಲ್ಲಿ ಶೇ.14-15 ಗೆ ಇಳಿದಿದೆ. ಅನೇಕ ರಾಜ್ಯಗಳಲ್ಲಿ ಶೇ.8 ಮತ್ತು 9ರಷ್ಟು ಆಗಿದೆ. ಇವೆಲ್ಲವನ್ನೂ ನೋಡಿಕೊಂಡು, ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಮುಖ್ಯಮಂತ್ರಿಗಳೇ ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

'ಬ್ಲ್ಯಾಕ್ ಫಂಗಸ್ ಔಷಧಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಎಂಟಕ್ಕೂ ಅಧಿಕ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಮಾರು 80 ಸಾವಿರ ವೈಲ್ ಮಾರುಕಟ್ಟೆಯಲ್ಲಿದೆ. ರಾಜ್ಯಕ್ಕೆ ಈವರೆಗೆ 8-10 ಸಾವಿರ ವೈಲ್ ದೊರೆತಿದೆ. ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 1,250 ಪ್ರಕರಣ ಕಂಡುಬಂದಿದೆ. 30-35 ಸಾವಾಗಿದೆ ಎನ್ನಲಾಗಿದ್ದರೂ ಸರಿಯಾದ ಡೆತ್ ಆಡಿಟ್ ಮಾಡಲು ಸೂಚಿಸಲಾಗಿದೆ. ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗೆ ದಾಖಲಾದ ಕಪ್ಪು ಶಿಲೀಂಧ್ರ ಸೋಂಕಿತರಿಗೆ ಔಷಧಿ ವಿತರಿಸಲಾಗುತ್ತಿದೆ' ಎಂದು ಡಾ.ಸುಧಾಕರ್ ತಿಳಿಸಿದರು.

ಕೋವಿಡ್ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ. 1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳಿಸುತ್ತಿರುವುದರಿಂದ ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ನಿನ್ನೆ 80 ಸಾವಿರ ಡೋಸ್ ಕೋವ್ಯಾಕ್ಸಿನ್ ಹಾಗೂ 2,17,310 ಡೋಸ್ ಕೋವಿಶಿಲ್ಡ್ ಪೂರೈಸಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News