ವಿಶ್ವಗುರು ಮಾಡುತ್ತೇನೆಂದು ಹೇಳಿ ಭಾರತವನ್ನು ದೈನೇಸಿ ಸ್ಥಿತಿಗೆ ತಂದಿದ್ದು ಸಾಧನೆಯೇ ?: ದಿನೇಶ್ ಗುಂಡೂರಾವ್

Update: 2021-05-30 15:09 GMT

ಬೆಂಗಳೂರು, ಮೇ 30: ಸುಳ್ಳಿನ ಶಿಲಾಮೂರ್ತಿಯಂತೆ ಇರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಭವೀಕರಿಸಿ ಜನರನ್ನು ಹಾದಿ ತಪ್ಪಿಸುವುದು ಸಾಧನೆಯಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ರವಿವಾರ ನರೇಂದ್ರ ಮೋದಿ ಪ್ರಧಾನಿಯಾಗಿ 7 ವರ್ಷ ಪೂರ್ಣಗೊಂಡಿರುವ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇಂದಿಗೆ 7 ವರ್ಷಗಳಾಗಿವೆ. ಇದಕ್ಕಾಗಿ ಬಿಜೆಪಿ ನಾಯಕರು ಸಂಭ್ರಮದಲ್ಲಿದ್ದಾರೆ. ಆದರೆ, ಈ ಸಂಭ್ರಮ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ದೇಶವನ್ನು ಹಿಂದೆಂದೂ ಕಾಣದ ಅಧೋಗತಿಗೆ ತಳ್ಳಿದಕ್ಕೋ ಅಥವಾ ಅಚ್ಚೇದಿನ್ ಕನಸು ತುಂಬಿ ಜನರಿಗೆ ಕೆಟ್ಟದಿನದ ಕರಾಳ ಅನುಭವ ನೀಡಿದಕ್ಕೋ? ಹೇಳಿ ನಿಮ್ಮ ಸಂಭ್ರಮವೇಕೆ? ಎಂದು ದಿನೇಶ್ ಕೇಳಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಕಾರ್ಪೋರೇಟ್ ಕಂಪೆನಿಯ ದಲ್ಲಾಳಿಯಾಗಿದ್ದು ಬಿಟ್ಟರೆ ಎಂದಾದರೂ ಜನರ ಪ್ರಧಾನಿಯಾದರೆ ?. ಎಲ್ಲಿ ಹೋಯಿತು ಕಪ್ಪುಹಣ ಮರಳಿ ತರುವ ಘೋಷಣೆ, ಎಲ್ಲಿ ಹೋಯಿತು ಭ್ರಷ್ಟಾಚಾರ ಮುಕ್ತ ಭಾರತ, ಮಾತಿನ ಮಹಾಶೂರರಾಗಿದ್ದೇ ಸಾಧನೆಯೇ ಎಂದು ಟೀಕಿಸಿದ್ದಾರೆ.

ಮನ್ ಕಿ ಬಾತ್ ಕೇಳಿ ಜನರ ಕಿವಿ ತೂತಾಯಿತೇ ಹೊರತು 1 ರೂ. ಉಪಯೋಗವಾಯಿತೆ. ಭಾರತ ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತ ಕೀಳು ಮಟ್ಟದಲ್ಲಿದೆ. ಜಿಡಿಪಿ ಬಾಂಗ್ಲಾದೇಶಕ್ಕಿಂತ ಕುಸಿದಿದೆ. ಭಾರತವನ್ನು ವಿಶ್ವಗುರು ಮಾಡುತ್ತೇನೆಂದವರು ಈಗ ದೇಶವನ್ನು ದೈನೇಸಿ ಸ್ಥಿತಿಗೆ ತಂದಿದ್ದೇ ಸಾಧನೆಯೇ ಎಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯವರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಬಣ್ಣದ ಮಾತುಗಳು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುವುದಿಲ್ಲ. ಮಾತಿನಿಂದ ಜನರನ್ನು ಮರುಳು ಮಾಡುವುದೇ ಸಾಧನೆಯೆಂದರೆ ಅದು ಅವಿವೇಕತನದ ಪರಮಾವಧಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕರಾಳ ಕೃಷಿ ಕಾಯ್ಧೆಯ ವಿರುದ್ಧ ರೈತರು ಕಳೆದ 6 ತಿಂಗಳಿನಿಂದ ಪ್ರತಿಭಟಿಸುತ್ತಿದ್ದಾರೆ. ರಾಜ್ಯಗಳಲ್ಲಿ ಚುನಾಯಿತ ಸರಕಾರಗಳನ್ನು ಆಪರೇಷನ್ ಕಮಲ ಎಂಬ ಅನಿಷ್ಟ ಕಾರ್ಯದ ಮೂಲಕ ಕೆಡುವುದು ಪ್ರಧಾನಿ ಕೆಲಸವೇ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದ್ದವರು ಆಪರೇಷನ್ ಕಮಲವೆಂಬ ಅಸಹ್ಯ ವೃಕ್ಷಕ್ಕೆ ನೀರೆರೆದು ಪೋಷಿಸಿದ್ದು ಸುಳ್ಳೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಮೋದಿ ಅಧಿಕಾರದ ಅವಧಿಯನ್ನು ದೊಡ್ಡ ಸಾಧನೆ ಎಂದು ಸಂಭ್ರಮಿಸುತ್ತಿರುವ ಬಿಜೆಪಿ, ಇತ್ತೀಚೆಗೆ ನ್ಯಾಯಾಲಯಗಳ ಅಭಿಪ್ರಾಯ ಗಮನಿಸಲಿ. ಜತೆಗೆ, ಒಮ್ಮೆ ಜನರ ಬಳಿ ಮಾತಾಡಿ ಬರಲಿ. ನಿಜವಾದ ಸಾಧನೆ ಏನೆಂಬುದು ತಿಳಿಯುತ್ತದೆ. ಸುಳ್ಳಿನ ಶಿಲಾಮೂರ್ತಿಯಂತಿರುವ ಮೋದಿಯವರನ್ನು ವೈಭವೀಕರಿಸಿ ಜನರನ್ನು ಹಾದಿ ತಪ್ಪಿಸುವುದು ಸಾಧನೆಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News