ಮೋದಿ ನೇತೃತ್ವದ ಸರಕಾರ ಜನರ ಸಂಕಷ್ಟಗಳನ್ನು ಅರಿತು ಕೆಲಸ ಮಾಡುತ್ತಿದೆ: ಪ್ರಹ್ಲಾದ್ ಜೋಶಿ

Update: 2021-05-30 15:40 GMT

ಹುಬ್ಬಳ್ಳಿ, ಮೇ 30: ಕಾಂಗ್ರೆಸೇತರ ಪಕ್ಷವೊಂದು ಏಳು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿರುವುದು ಸ್ವತಂತ್ರ ಭಾರತದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. ಸರಕಾರ ಜನರ ಸಂಕಷ್ಟಗಳನ್ನು ಅರಿತು ಕೆಲಸ ಮಾಡುತ್ತಿದೆ ಹಾಗೂ ಯುದ್ಧೋಪಾದಿಯಲ್ಲಿ ಕೊರೋನ ಪರಿಹಾರಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ಕೇಶ್ವಾಪುರ ಮಯೂರಿ ಬಡಾವಣೆ ಉದ್ಯಾನವನವನದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯದಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. 2019 ಪಕ್ಷದ ಆಡಳಿತ ವೈಖರಿಯನ್ನು ಮೆಚ್ಚಿ ದೇಶದ ಜನರು ಮತಚಲಾಯಿಸಿದ್ದಾರೆ. ಈ ಎರಡು ವರ್ಷದ ಅಧಿಕಾರ ಅವಧಿಯ 24 ತಿಂಗಳಿನಲ್ಲಿ 16 ತಿಂಗಳು ಕೋವಿಡ್ ಕರಿಛಾಯೆಯಲ್ಲಿ ಕಳೆದು ಹೋಗಿದೆ. ಬಹಳಷ್ಟು ಜನರು ತಮ್ಮ ಹತ್ತಿರದವರನ್ನು ಕಳೆದುಕೊಂಡಿದ್ದಾರೆ. ಇದರ ನೋವು ನಮಗೂ ಇದೆ ಭಾರತದಲ್ಲಿ ಕೋವಿಡ್‍ನಿಂದ ಗುಣಮುಖರಾಗುವವರ ಪ್ರಮಾಣ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿದೆ ಎಂದರು. 

ಕೊರೋನ ಎರಡನೆ ಅಲೆಯ ಆರಂಭದ ಸಂದರ್ಭದಲ್ಲಿ 900 ಟನ್ ಇದ್ದ ಮೆಡಿಕಲ್, ಆಕ್ಸಿಜನ್ ಬೇಡಿಕೆ ಈಗ 9 ಸಾವಿರ ಟನ್‍ಗೆ ತಲುಪಿದೆ. ಇದನ್ನು ಸರಿದೂಗಿಸಿ ಎಲ್ಲೆಡೆ ಆಕ್ಸಿಜನ್ ದೊರೆಯುವಂತೆ ಮಾಡಲಾಗಿದೆ. ರೆಮ್‍ಡೆಸಿವರ್ ಔಷಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಇದ್ದ ನಿರ್ಬಂಧವನ್ನು ತೆಗೆಯಲಾಗಿದೆ. ಬರುವ ಸವಾಲುಗಳನ್ನು ಎದುರಿಸಿ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಮೋದಿ ನೇತೃತ್ವದಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. 

ಆರ್ಥಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಲಾಕ್‍ಡೌನ್ ಮುಂದುವರಿಸುವ ಕುರಿತು ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳುತ್ತದೆ. ಜೂ.7 ವರೆಗೆ ಕಾಯಬೇಕು. ಈಗಲೇ ಲಾಕ್‍ಡೌನ್ ಕುರಿತು ಭವಿಷ್ಯ ನುಡಿಯುವುದು ತಪ್ಪಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾವರ್ಕರ್, ಸಂತೋಷ ಚವ್ಹಾಣ್ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News