×
Ad

ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ಖಂಡಿಸಿ #ಲಸಿಕೆಯಲ್ಲೂಮೋಸ ಟ್ವಿಟರ್ ಅಭಿಯಾನ

Update: 2021-05-30 22:55 IST

ಆಕ್ಸಿಜನ್, ಜೀವರಕ್ಷಕ ಔಷಧಿಗಳ ಹಂಚಿಕೆಯಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ಅನ್ಯಾಯವೆಸಗಿತು. ಈಗ ಕೋವಿಡ್ ಲಸಿಕೆ ಹಂಚಿಕೆಯಲ್ಲೂ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

#ಲಸಿಕೆಯಲ್ಲೂಮೋಸ ಎಂಬ ಹ್ಯಾಶ್ ಟ್ಯಾಗ್ ಬಳಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಟ್ವಿಟರ್ ಅಭಿಯಾನದಲ್ಲಿ ಕೈಜೋಡಿಸಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ.

ಕೊರೋನದಿಂದ‌ ಮನೆಮನೆಯಲ್ಲೂ‌ ಸಾವುಗಳು ಸಂಭವಿಸಿ ಜನರು ಕಣ್ಣೀರಿಡುತ್ತಿದ್ದಾರೆ. ಲಾಕ್ ಡೌನ್‌ನಿಂದ ವ್ಯಾಪಾರ-ಉದ್ಯೋಗಗಳೆಲ್ಲ ನಿಂತುಹೋಗಿ ಜನರು ಬವಣೆ ಪಡುತ್ತಿದ್ದಾರೆ.‌ ಒಕ್ಕೂಟ ಸರ್ಕಾರ ಲಸಿಕೆಯನ್ನೂ ನೀಡದೆ ಜನರ ಜೀವಗಳ ಜತೆ ಚೆಲ್ಲಾಟವಾಡುತ್ತಿದೆ. #ಲಸಿಕೆಯಲ್ಲೂಮೋಸ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಟ್ವೀಟ್ ಮಾಡಿದ್ದಾರೆ.

ಬೀದಿಬೀದಿಯಲ್ಲೂ ಲಸಿಕಾ ಕೇಂದ್ರ ತೆರೆಯಿರಿ. ಪ್ರತಿಯೊಬ್ಬ ಕನ್ನಡಿಗನಿಗೂ ಉಚಿತವಾಗಿ ಲಸಿಕೆ ನೀಡಿ. ಇಲ್ಲವಾದಲ್ಲಿ ಕನ್ನಡದ ಜನತೆ ನಿಮ್ಮನ್ನೆಂದು ಕ್ಷಮಿಸುವುದಿಲ್ಲ, ಬರೆದಿಟ್ಟುಕೊಳ್ಳಿ ಎಂದು ಅವರು ತಿಳಿಸಿದ್ದಾರೆ.

ಕನ್ನಡಿಗರು ದುಡಿದು ಗಳಿಸಿ ಕೊಟ್ಟ ಹಣದಿಂದ ಇಂದು ಕಾಲ ಭಾರತ ಉಸಿರಾಡುತ್ತಿದೆ. ಆದರೆ ಕನ್ನಡಿಗರ ಉಸಿರಿಗೆ ಸಂಚಕಾರ ಬಂದಾಗ ಕೇಂದ್ರ ಬಾಯಿಮೂಗು ಮುಚ್ಚಲು ನೋಡುವ ನೀಚತನವನ್ನ ಕನ್ನಡಿಗರು ಎಚ್ಚರಿಕೆಯಿಂದ ಗಮನಿಸಬೇಕು, ಪ್ರಶ್ನಿಸಬೇಕು #ಲಸಿಕೆಯಲ್ಲೂಮೋಸ ಯಾಕೆ? ಎಂದು ಶಿವಾನಂದ ಗುಂಡಾನವರ ಎಂಬವರು ಪ್ರಶ್ನಿಸಿದ್ದಾರೆ.

ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇನೆ ಎಂದು ಹೇಳಿ, ಖಾಸಗಿ ಆಸ್ಪತ್ರೆಗಳ ಮೂಲಕ 900 ರೂ, 1200ರೂ ಗೆ ಲಸಿಕೆಗಳನ್ನು ಮಾರಾಟ ಮಾಡಿ ಉಚಿತ ಲಸಿಕೆ ಯಾರಿಗೆ ನೀಡುತ್ತಿದೆ? #ಲಸಿಕೆಯಲ್ಲೂಮೋಸ ಎಂದು ಹರ್ಷ ಎಂಬವರು ಟ್ವೀಟ್ ಮಾಡಿದ್ದಾರೆ.

ಬಡ ದೇಶವಾಸಿಗಳನ್ನ ಮಾರಕ ಕೊರೋನ ರೋಗದಿಂದ ಉಳಿಸೋ ಜೀವರಕ್ಷಕ ಲಸಿಕೆಯಲ್ಲೂ ಕೂಡ ಕಮೀಷನ್ ಬೇಕೇ. ಶಿಕ್ಷಣ, ಆರೋಗ್ಯ, ಕೃಷಿಯಲ್ಲಾದರೀ ಕಮೀಷನ್ ಹಾಗೂ ಭ್ರಷ್ಟಾಚಾರವನ್ನ ಕಡಿಮೆ ಮಾಡಿ, ದೇಶವನ್ನ ಉಳಿಸಿ. ಇದು ದೇಶವಾಸಿಗಳ ಅಳಿವು ಉಳಿವಿನ ಪ್ರಶ್ನೆ. #ಲಸಿಕೆಯಲ್ಲೂಮೋಸ ಎಂದು ಎಂಬವರು ಸುರೇಶ್ ಕುಮಾರ್.ಜಿ.ಆರ್ ಕಿಡಿಕಾರಿದ್ದಾರೆ.

ಭಾರತವನ್ನ ಒಗ್ಗೂಡಿಸಲು ಅಂದು ಮೈಸೂರಿನ ಅರಸರು ಉಚಿತವಾಗಿ ವಿಮಾನವನ್ನ ಸರ್ದಾರ್ ಪಟೇಲರಿಗೆ ನೀಡಿ ನೆರವಾಗಿ ಭಾರತವೆಂಬ ಒಕ್ಕೂಟ ಕಟ್ಟಲು ಮಹತ್ವದ ಪಾತ್ರ ವಹಿಸಿದ್ದು ಕರ್ನಾಟಕ. ಆದರೆ ಇಂದು ಹೆಣ ಹೊರಲು ಬೊಂಬು ಕೊಡದಿರುವಷ್ಟು ಮೊಂಡುತನ ಕೇಂದ್ರ ಕರ್ನಾಟಕದ ಮೇಲೆ ತೋರಿಸುತ್ತಿರುವುದು ದುರಂತ ಎಂದು ಶ್ರೀಕಾಂತ ಎಂ.ಸಿ ಎಂಬವರು ಟೀಕಿಸಿದ್ದಾರೆ.

ಎಷ್ಟು ಅಂತ ಕರ್ನಾಟಕಕ್ಕೆ ಅನ್ಯಾಯ ಮಾಡ್ತೀರಿ? 2021ರಲ್ಲಿ ಒರಿಸ್ಸಾದಲ್ಲಿ ನೆರೆ ಹಾವಳಿ, 24 ಗಂಟೆ ಒಳಗೆ 900 ಕೋಟಿ. ಗುಜರಾತ್ ನೆರೆ, ಮಧ್ಯಂತರ ರೂ.1000 ಕೋಟಿ, ಕರ್ನಾಟಕದಲ್ಲಿ 2019, 2020 ನೆರೆ ಹಾವಳಿ. ತಜ್ಞರು ಬಂದು ನೋಡಿ ವರದಿ ಕೊಟ್ಟು ಆಮೇಲೆ ಹಣ ಕೊಡ್ತೀವಿ ಅಂದ್ರಿ. 6 ತಿಂಗಳಾದ್ರೂ ಬರಲಿಲ್ಲ. ಈಗ #ಲಸಿಕೆಯಲ್ಲೂಮೋಸ ಎಂದು ಉಮೇಶ್ ಶಿವರಾಜು ಎಂಬವರು ತಿಳಿಸಿದ್ದಾರೆ.

ಲಸಿಕೆಯನ್ನು ಸರಕಾರವೇ ಎಲ್ಲರಿಗೂ ಉಚಿತವಾಗಿ ಕೊಡಬೇಕು ಅಂತ ಹೇಳಿಕೊಂಡು ಬಂದಿದ್ದೇನೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ನಾನಂತೂ ಲಸಿಕೆ ಪಡೆಯೋಲ್ಲ. ಇದು ಬರಿ ದುಡ್ಡಿನ ಪ್ರಶ್ನೆಯಲ್ಲ ಎಂದು ಅರುಣ್ ಜಾವಗಲ್ ಎಂಬವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News