ನಕಲಿ ದಾಖಲೆ ತೋರಿಸಿ ಮಹಿಳೆಯಿಂದ ಕೋಟ್ಯಂತರ ರೂ. ವಂಚನೆ: ದೂರು

Update: 2021-05-30 17:54 GMT

ಚಿಕ್ಕಬಳ್ಳಾಪುರ, ಮೇ 30: ಮಹಿಳೆಯೊಬ್ಬರು ಆರ್‌ಬಿಐನ ನಕಲಿ ದಾಖಲೆಗಳನ್ನು ತೋರಿಸಿ 10 ಕೋಟಿ ರೂ. ಕಂಪೆನಿಯಲ್ಲಿ ಹೂಡುವುದಾಗಿ ನಂಬಿಸಿ ಹೈದರಾಬಾದ್ ಮೂಲದ ಬೆಂಗಳೂರಿನ ಉದ್ಯಮಿಯೊಬ್ಬರಿಗೆ 2 ಕೋಟಿ ಎರಡು ಲಕ್ಷ ರೂ. ವಂಚಿಸಿರುವುದಾಗಿ ವರದಿಯಾಗಿದೆ.

ಈಕೆಯ ಮೋಸದ ಜಾಲಕ್ಕೆ ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟನೊಬ್ಬ ಸಾಥ್ ನೀಡಿದ್ದಾನೆ ಎಂದು ನೀಡಿದ ದೂರಿನ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ನಗರದ 17ನೇ ವಾರ್ಡ್‌ನ ಮನೆಯ ಮೇಲೆ ದಾಳಿ ನಡೆಸಿ ಮಹಿಳೆ ಸೇರಿದಂತೆ ಇಬ್ಬರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಮೋಸದ ಜಾಲಕ್ಕೆ ಇಳಿದ ಅರ್ಚನಾ ಎಂಬ ಮಹಿಳೆ ಹಲವರಿಂದ ಕೋಟ್ಯಂತರ ರೂ. ವಂಚಿಸಿರುವುದಾಗಿ ತಿಳಿದುಬಂದಿದೆ.

ಮೋಸಗೊಂಡ ಉದ್ಯಮಿ ಚಿಕ್ಕಳ್ಳಾಪುರದ ಪೋಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೋಲೀಸರು ನಗರದ 17ನೇ ವಾರ್ಡ್‌ನ ಕೋಟೆ ಬಡಾವಣೆಯ ಆಕೆಯ ಮನೆ ಮೇಲೆ ದಾಳಿ ನಡೆಸಿ ಸುಮಾರು 75 ಸಾವಿರ ರೂ. ನಗದು, ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ನಟ ಶಂಕರ್, ಶ್ರೀಪತಿ, ಶ್ರೀಹರಿ ಎಂಬವರನ್ನು ಬಂಧಿಸಿ ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಘಟನೆಯ ವಿವರ: ಹೈದರಾಬಾದ್‌ನ ವಂಶಿಕೃಷ್ಣ ವಂಚನೆಗೊಳಗಾದ ಉದ್ಯಮಿ. ಅರ್ಚನಾ 'ವಿದೇಶಿ ಕಂಪೆನಿಯೊಂದಕ್ಕೆ ರೈಸ್ ಪುಲ್ಲಿಂಗ್ ರೇಡಿಯಾಕ್ಟರ್ ಮಾರಾಟ ಮಾಡಿದ್ದರಿಂದ 6 ಲಕ್ಷ 35 ಸಾವಿರ ಕೋಟಿ ರೂ. ಆರ್‌ಬಿಐ ಫಾರಿನ್ ಎಕ್ಸ್‌ಚೇಂಜ್ ವಿಭಾಗಕ್ಕೆ ಹಣ ಸಂದಾಯ ಆಗಿದೆ. ಅದಕ್ಕೆ ಆರ್‌ಬಿಐ ಸೆಸ್ 24 ಕೋಟಿ ರೂ. ಕೊಡಬೇಕು. ಈ ಹಣ ನೀವು ಕೊಟ್ಟರೆ ಮುಂದಿನ 48 ಘಂಟೆಗಳಲ್ಲಿ ನಿಮ್ಮ ಖಾತೆಗೆ 10 ಕೋಟಿ ರೂ. ವರ್ಗಾಯಿಸುತ್ತೇನೆ’ ಎಂದು ಹೇಳಿ ವಂಚಿಸಿರುವುದಾಗಿ ಆರೋಪಿಸಿದ್ದಾರೆ.

ಈ ಜಾಲದಲ್ಲಿ ಅವರ ತಂಗಿ ಸೇರಿದಂತೆ ಹಲವರು ಭಾಗಿಯಾಗಿದ್ದು, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಪೋಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News