ಚಾಮರಾಜನಗರ: ಒಡೆಯರ್ ಪಾಳ್ಯದ ಸೋಲಿಗ ಕುಟುಂಬಗಳಿಗೆ ಟಿಬೇಟಿಯನ್ನರ ನೆರವು

Update: 2021-05-30 17:59 GMT

ಚಾಮರಾಜನಗರ, ಮೇ 30: ಚೀನಾ ಆಕ್ರಮಿತ ಟಿಬೇಟ್ ದೇಶದಿಂದ ಬಂದ ಭಾರತಕ್ಕೆ ಬಂದು ನಿರಾಶ್ರಿರಾಗಿರುವ ಟಿಬೇಟಿಯನ್ನರು ಚಾಮರಾಜನಗರ ಜಿಲ್ಲೆಯಲ್ಲಿನ ಕಾಡಿನ ನಡುವೆ ಜೀವನ ಸಾಗಿಸುವ ಸೋಲಿಗರ ಕುಟುಂಬಗಳಿಗೆ ಕೊರೋನ ಸಂಕಷ್ಟ ಕಾಲದಲ್ಲಿ ನೆರವಾಗಿದ್ದಾರೆ.

ಹನೂರು ತಾಲೂಕಿನ ಒಡೆಯರ ಪಾಳ್ಯದಲ್ಲಿರುವ ಟಿಬೇಟ್ ನಿರಾಶ್ರಿತರು ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಯ 450ಕ್ಕೂ ಹೆಚ್ಚು ಸೋಲಿಗ ಕುಟುಂಬಗಳಿಗೆ ಆಹಾರ ಧಾನ್ಯ, ಬಟ್ಟೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಡೆಯರಪಾಳ್ಯದ ಬಳಿ ಇರುವ ಟಿಬೇಟಿಯನ್ ನಿರಾಶ್ರಿತರು ತಾವೇ ಕಷ್ಟದಲ್ಲಿದ್ದರೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬುಡಕಟ್ಟು ಸೋಲಿಗರ ಸಹಾಯಕ್ಕೆ ಧಾವಿಸಿದ್ದಾರೆ. ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಯ ಕಡಕಲಕಿಂಡಿ, ಹಾವಿನ ಮೂಲೆ, ಮಾವತ್ತೂರು, ಯರಗಬಾಳು, ಉದ್ದಟ್ಟಿ, ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು, ಜೀರಿಗೆ ಗದ್ದೆಯ 450 ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ಸೋಲಿಗರ ನೆರವಿಗೆ ಮುಂದಾಗಿದ್ದಾರೆ.

ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುವ ಬುಡಕಟ್ಟು ಸೋಲಿಗರು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬೇಡಗುಳಿ, ಅತ್ತಿಖಾನೆ ಮೊದಲಾದ ಕಾಫಿ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಕಳೆದ ಲಾಕ್‌ಡೌನ್ ಪರಿಣಾಮ ಎಲ್ಲಿಯೂ ಹೋಗಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡ ಒಡೆಯರಪಾಳ್ಯ ನಿರಾಶ್ರಿತರ ವಸಾಹತು ಶಿಬಿರದ ಟಿಬೇಟಿಯನ್ನರು ಸೋಲಿಗರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಜೀವನೋಪಾಯಕ್ಕೆ ಕೃಷಿ ಹಾಗೂ ಸ್ವೆಟರ್ ಮಾರಾಟ ಅವಲಂಬಿಸಿರುವ ಈ ಟಿಬೇಟಿಯನ್ ನಿರಾಶ್ರಿತರು ಲಾಕ್‌ಡೌನ್‌ನಿಂದ ಸ್ವತಃ ಸಂಕಷ್ಟದಲ್ಲಿದ್ದಾರೆ. ಆದರೂ ತಾವು ಕೂಡಿಟ್ಟ ಹಣದಲ್ಲಿ ತಾನಾ ಚಾರಿಟಬಲ್ ಟ್ರಸ್ಟ್ ಮೂಲಕ ಸೋಲಿಗರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಹೃದಯ ವೈಶಾಲ್ಯತೆ ಮೊೆದಿದ್ದಾರೆ.

ಟಿಬೆಟಿಯನ್ ನಿರಾಶ್ರಿತರ ಶಿಬಿರದ ಸುತ್ತಮುತ್ತ ಹಾಡಿಗಳಲ್ಲಿರುವ ಸೋಲಿಗರ ಸ್ಥಿತಿಗತಿ ಅರಿತ ಟಿಬೆಟಿಯನ್ ಜನರು ತಮ್ಮ ಇತಿಮಿತಿಯಲ್ಲಿ ಸಹಾಯಕ್ಕೆ ಧಾವಿಸಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತಮ್ಮ ದೇಶ ಬಿಟ್ಟು ಬಂದಿರುವ ಟಿಬೆಟಿಯನ್‌ನ್ನರು ಇಲ್ಲಿನ ಬಡವರ ಕಷ್ಟ ಅರಿತು , ತಾವೇ ಕಷ್ಟದಲ್ಲಿದ್ದರೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಅವರ ಗುಣ ಇತರರಿಗೆ ಮಾದರಿಯಾಗಿದೆ.

- ಕೃಷ್ಣಮೂರ್ತಿ,ಪಿ.ಜಿ.ಪಾಳ್ಯ ಗ್ರಾಪಂ ಅಧ್ಯಕ್ಷ

Writer - ನಾ.ಅಶ್ವಥ್ ಕುಮಾರ್

contributor

Editor - ನಾ.ಅಶ್ವಥ್ ಕುಮಾರ್

contributor

Similar News