ಶಿಕಾರಿಪುರ : ಚಾಲಕ, ಕ್ಲೀನರುಗಳಿಗೆ ಆಹಾರ ಕಿಟ್ ವಿತರಿಸುತ್ತಿರುವ ಮುಹಮ್ಮದ್ ಹನೀಫ್

Update: 2021-05-31 08:24 GMT

ಶಿಕಾರಿಪುರ : ಪಟ್ಟಣದ ಕರ್ನಾಟಕ ಪ್ರಾವಿಜನ್ ಸ್ಟೋರ್ ಮಾಲಕ ಮುಹಮ್ಮದ್ ಹನೀಫ್ ಅವರು ಕೊರೋನ ಸಂಕಷ್ಟದ ಸಮಯದಲ್ಲಿ ಜನಸೇವೆಗೆ ಮುಂದಾಗಿದ್ದಾರೆ.

ಸ್ನೇಹಿತರ ಜತೆಗೂಡಿ ನಿತ್ಯ ಸಂಜೆ ನೀರಿನ ಬಾಟಲ್, ಊಟದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಆ ಮೂಲಕ ಸದ್ದಿಲ್ಲದೇ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಲಾಕ್‌ಡೌನ್ ನಿ೦ದಾಗಿ ಪರಸ್ಥಳದಿಂದ ಬರುವ ವಾಹನ ಚಾಲಕರು ಊಟ- ತಿಂಡಿಗೆ ಪರದಾಡುತ್ತಿದ್ದಾರೆ. ಹೋಟೆಲ್, ಕ್ಯಾ೦ಟೀನ್ ಸಹಿತ ಎಲ್ಲ ರೀತಿಯ ಬೀದಿ ಬದಿಯ ವ್ಯಾಪಾರಕ್ಕೆ ಪೂರ್ಣವಿರಾಮ ಬಿದ್ದಿದ್ದು, ವಾಹನ ಚಾಲಕರು ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡ ಮುಹಮ್ಮದ್ ಹನೀಫ್ ನೆರವಿನ ಹಸ್ತ ಚಾಚಿದ್ದಾರೆ.

ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಲಾರಿ ಚಾಲಕರು, ಕ್ಲೀನರ್‌ಗಳಿಗೆ ಊಟ ತಿಂಡಿ ಪೊಟ್ಟಣಗಳು, ನೀರಿನ ಬಾಟಲಿಗಳನ್ನು ನೀಡುವ ಸೇವೆ ಹಲವುದಿನಗಳಿಂದ ಕೈಗೊಂಡಿದ್ದಾರೆ. ತಂದೆಯ ಸೇವೆಗೆ ಪುತ್ರರು ಕೂಡ ಕೈ ಜೋಡಿಸಿದ್ದಾರೆ.

ನಿತ್ಯ ಸಂಜೆ ತಮ್ಮ ವಾಹನದಲ್ಲಿ ಪುತ್ರರಾದ ಉಪ್ಪಿನಕಾಯಿ ಉದ್ಯಮಿ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಸಲೀಮ್, ಸ್ನೇಹಿತರಾದ ಸ್ಕಂದ ಮೆಡಿಕಲ್ ಮಾಲಕ ನಾಗರಾಜ್, ಮೊಟ್ಟೆ ವ್ಯಾಪಾರಿಗಳಾದ ಅಬ್ದುಲ್ ಕರೀಂ, ಇಮ್ತಿಯಾಝ್, ಲಾರಿ ಮಾಲಕ ನಾಸಿರ್, ಫಯಾಝ್ ಅಹ್ಮದ್, ಆಟೋ ಮೊಬೈಲ್ ಮಾಲಕ ಮುಜೀಬ್ ಮತ್ತು ನೂರ್ ಅಹ್ಮದ್ ಜತೆಗೆ ಸೇವೆಗೆ ಮುಂದಾಗುತ್ತಾರೆ. ಹೆಚ್ಚಿನ ವಾಹನ ಸಂಚಾರವಿರುವ ಪಟ್ಟಣದ ಶಿವಮೊಗ್ಗ ವೃತ್ತದ ಬಳಿ ಲಾರಿ ಚಾಲಕರು ಸಹಿತ ಸ್ಥಳೀಯ ಸಣ್ಣಪುಟ್ಟ ವಾಹನಗಳನ್ನು ನಿಲ್ಲಿಸಿ ಊಟದ ಪ್ಯಾಕೇಟ್‌, ನೀರಿನ ಬಾಟಲ್ ಗಳನ್ನು ವಿತರಿಸುತ್ತಿದ್ದಾರೆ.

''ಕೊರೋನ ಜನರ ನೆಮ್ಮದಿ ಕಸಿದಿದೆ. ಸೋಂಕು ತಡೆಗಟ್ಟಲು ನಿತ್ಯ ವೈದ್ಯ - ಸಿಬ್ಬಂದಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಕುಟುಂಬದ ಹಿತವನ್ನು ತೊರೆದು ಶ್ರಮಿಸುತ್ತಿದ್ದಾರೆ. ಇ೦ಥ ಸ೦ದರ್ಭದಲ್ಲಿ ಸಮಾಜಕ್ಕೆ ಪೂರಕವಾದ ಅಳಿಲು ಸೇವೆ ಸಲ್ಲಿಸುವ ಅವಕಾಶ ಪ್ರತಿಯೊಬ್ಬರಿಗೂ ಇದೆ. ಈ ದಿಸೆಯಲ್ಲಿ ದೂರದಿಂದ ಅನಿವಾರ್ಯವಾಗಿ ಬರುವ ಲಾರಿ ಚಾಲಕರು, ಕ್ಲೀನರ್‌ಗಳ ಹಸಿದ ಹೊಟ್ಟೆ ತುಂಬಿಸುವ ಪುಣ್ಯದ ಕಾರ್ಯವನ್ನು ಆಯ್ಕೆ ಮಾಡಿಕೊಂಡಿದ್ದೇವೆ''.

- ಮುಹಮ್ಮದ್ ಹನೀಫ್, ಕರ್ನಾಟಕ ಪ್ರಾವಿಜನ್ ಸ್ಟೋರ್ ಮಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News