×
Ad

ಲೆಕ್ಕ ಕೇಳಿದ ಸಂಸದ ಪ್ರತಾಪ್ ಸಿಂಹ; ಖರ್ಚುವೆಚ್ಚದ ವಿವರ ಬಿಡುಗಡೆಗೊಳಿಸಿದ ಮೈಸೂರು ಡಿಸಿ ರೋಹಿಣಿ

Update: 2021-05-31 14:42 IST

ಮೈಸೂರು: ಜಿಲ್ಲಾಡಳಿತ ಮತ್ತು ತಮ್ಮ ಏಕೈಕ ಗುರಿ ಕೋವಿಡ್ ನಿಯಂತ್ರಿಸುವುದಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ನೀಡಿ, ಕೋವಿಡ್ ಖರ್ಚು ವೆಚ್ಚದ ವಿವರವನ್ನು ಬಿಡುಗಡೆ ಮಾಡಿದ್ದಾರೆ.

ನಮ್ಮ ಗುರಿ ಕೊರೋನ ನಿಯಂತ್ರಿಸುವುದಾಗಿದೆ. ಈ ನಿಟ್ಟಿನಲ್ಲಿಯೇ ತಮ್ಮ ಕೆಲಸ ಮತ್ತು ಗಮನ ಇರಲಿದೆ. ವೈಯಕ್ತಿಕ ದಾಳಿಯಿಂದ ತಮ್ಮನ್ನು ಕೆಲಸದಿಂದ ದೂರ ಇರಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಆದರೆ ಇಂತಹ ಸುಳ್ಳು ಹೇಳಿಕೆಗಳು ಉನ್ನತ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರು ನೀಡಿರುವುದರಿಂದ ಕೋವಿಡ್ ಹೋರಾಡುತ್ತಿರುವವರಿಗೆ ಭೀತಿ ಹುಟ್ಟಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೋವಿಡ್ ನಿರ್ವಹಣೆಗೆಂದು ಸರ್ಕಾರ ಬಿಡುಗಡೆ ಮಾಡಿರುವ ವಿಪತ್ತು ನಿರ್ವಹಣಾ ಬಳಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅವರು, ಮೈಸೂರು ಜಿಲ್ಲೆಯಲ್ಲಿ 2020  ಮಾಚ್೯ ತಿಂಗಳಿನಲ್ಲಿ ಮೊದಲ‌ ಬಾರಿಗೆ ಕೋವಿಡ್ ಪ್ರಕರಣ ಕಾಣಿಸಿಕೊಂಡ ನಂತರದಿಂದ ಇದುವರಗೂ ಸರ್ಕಾರದಿಂದ ವಿಪತ್ತು ಪರಿಹಾರ ನಿಧಿಯಡಿ ಒಟ್ಟು 41 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದ್ದಾರೆ.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅವರು, ಜಿಲ್ಲಾಡಳಿತ, ಅಧಿಕಾರಿಗಳ ಮತ್ತು ಸಿಬ್ಬಂದಿಯ ದಣಿವರಿಯದ ಕೆಲಸದಿಂದ ಲಸಿಕೆ ನೀಡುವಲ್ಲಿ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆ ಶೇ.72 ರಷ್ಟು ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

ಕೊರೋನ ನಿರ್ವಹಣೆಗೆ ಜಿಲ್ಲಾಡಳಿತ ಖರ್ಚು ಮಾಡಿರುವ ಲೆಕ್ಕ:

 ಜಿಲ್ಲಾಸ್ಪತ್ರೆಯ ವೈದ್ಯಕೀಯ ಉಪಕರಣ, ಔಷಧ, ಪಿಪಿಇ ಕಿಟ್, ಮಾಸ್ಕ್, ಸ್ಟೇಷನರಿ ಇತ್ಯಾದಿ 13 ಕೋಟಿ ರೂ., ಐಸೂಲೇಶನ್ ವ್ಯವಸ್ಥೆ, ಕೋವಿಡ್ ಕೇರ್ ಸ್ಥಾಪನೆ ನಿರ್ವಹಣೆ ಇತ್ಯಾದಿ 5 ಕೋಟಿ ರೂ, ಕ್ವಾರಂಟೈನ್ ಒಳಪಟ್ಟವರಿಗೆ ಊಟ, ಹೋಟೆಲ್ ವ್ಯವಸ್ಥೆಗೆ  4 ಕೋಟಿ ರೂ, ಮೈಸೂರು ಮೆಡಿಕಲ್ ಕಾಲೇಜಿಗೆ ಪರೀಕ್ಷಾ ಸಲಕರಣೆಗೆ 7 ಕೋಟಿ ರೂ. ಸ್ವಾಬ್ ಕಲೆಕ್ಷನ್ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ 1 ಕೋಟಿ ರೂ, ವ್ಯಾಕ್ಸಿನೇಷನ್ ಮತ್ತು ಟೆಸ್ಟಿಂಗ್ ವಾಹನದ ವ್ಯವಸ್ಥೆಗೆ 4 ಕೋಟಿ ರೂ,  ಆಮ್ಲಜನಕ ವ್ಯವಸ್ಥೆಗೆ 1 ಕೋಟಿ ರೂ, ಇತರೆ (ದೂರವಾಣಿ, ಕಂಪ್ಯೂಟರ್, ಶಾಮಿಯಾನ ಇತ್ಯಾದಿ) 1 ಕೋಟಿ ರೂ. ಒಂದು ವರ್ಷಕ್ಕೂ ಹೆಚ್ವಿನ ಅವಧಿಯಲ್ಲಿ 36 ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News