ರಾಜ್ಯದಲ್ಲಿ ಲಾಕ್‍ಡೌನ್ ಇನ್ನೂ 14 ದಿನ ವಿಸ್ತರಣೆ ಸಾಧ್ಯತೆ

Update: 2021-05-31 11:41 GMT

ಬೆಂಗಳೂರು, ಮೇ 31: ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಜೂನ್ 7ರ ಬೆಳಗ್ಗೆ 6ಗಂಟೆಯ ವರೆಗೆ ಲಾಕ್‍ಡೌನ್ ಹೇರಲಾಗಿದ್ದು, ಆ ಬಳಿಕವೂ ಇನ್ನೂ ಹದಿನಾಲ್ಕು ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ ಎಂದು ಗೊತ್ತಾಗಿದೆ.

ಈಗಾಗಲೇ ಕೇಂದ್ರ ಸರಕಾರ ಸೋಂಕು ಸಂಪೂರ್ಣ ನಿಯಂತ್ರಣ ದೃಷ್ಟಿಯಿಂದ ಜೂನ್ ಅಂತ್ಯದವರೆಗೆ ಲಾಕ್‍ಡೌನ್ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶಕ್ಕೆ ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಇನ್ನೂ 14 ದಿನಗಳ ಕಾಲ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧದ ವರದಿಯಲ್ಲಿ ಸಮಿತಿಯು ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ನೀಡಿದ್ದು, ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ್ದಾರೆ. ಜೂನ್ 5 ಅಥವಾ 6ಕ್ಕೆ ತಜ್ಞರು ಹಾಗೂ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಲಾಕ್‍ಡೌನ್ ವಿಸ್ತರಣೆ ಕುರಿತು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ತಿಳಿಸಿದ್ದಾರೆ. ತಜ್ಞರ ಸಮಿತಿ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಇನ್ನೂ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News