ಜಿಲ್ಲೆಯಲ್ಲಿ ಜೂ.3 ರಿಂದ 7ರ ಬೆಳಗ್ಗೆ 6 ಗಂಟೆಯವರೆಗೆ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್: ಚಿಕ್ಕಬಳ್ಳಾಪುರ ಡಿಸಿ

Update: 2021-05-31 12:36 GMT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಕಳೆದ ವಾರ ಜಾರಿಗೊಳಿಸಿದ್ದ ಲಾಕ್ ಡೌನ್ ಅನುಕೂಲವಾಗಿದ್ದು ಮತ್ತಷ್ಟು ಕೋವಿಡ್ ಸೋಂಕು ನಿಯಂತ್ರಿಸುವ ಹಿತದೃಷ್ಟಿಯಿಂದ ಜೂನ್ 3 ರ ಬೆಳಿಗ್ಗೆ 6 ಗಂಟೆಯಿಂದ ಜೂನ್  7ರ ಬೆಳಿಗ್ಗೆ 6 ಗಂಟೆಯವರೆಗೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. 

ಮೇ.30ರಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನಿಸಿದಂತೆ ಆರ್.ಲತಾ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಚಿಕ್ಕಬಳ್ಳಾಪುರ ಜಿಲ್ಲೆ ಆದ ನಾನು ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಾಲಂ 30,34 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ  ಜೂನ್ 03ರ ಬೆಳಗ್ಗೆ 6-00 ಗಂಟೆಯಿಂದ ಜೂನ್07ರ ಬೆಳಗ್ಗೆ 6-00 ಗಂಟೆಯವರೆಗೆ ಲಾಕ್ ಡೌನ್ ವಿಧಿಸಿ ಕಟ್ಟುನಿಟ್ಟಾಗಿ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಆದೇಶಿಸಿದ್ದಾರೆ. 

ವೈದ್ಯಕೀಯ ಸೇವೆ ಅತೀ ತುರ್ತು ಸೇವೆಗಳನ್ನು ಹಾಗೂ ಸರ್ಕಾರಿ ನೌಕರರನ್ನು ಕರೆದೊಯ್ಯುವ ವಾಹನಗಳು ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಹೊರತು ಪಡಿಸಿ ಇತರೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು  ಸಂಪೂರ್ಣವಾಗಿ ನಿಷೇಧಿಸಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳು, ವ್ಯಾಪಾರ ನಡೆಸುವುದನ್ನು ನಿಷೇಧಿಸಿದೆ, ಕೇವಲ ಹಾಲು ಸರಬರಾಜು ಮಾಡುವ ನಂದಿನಿ ಕೇಂದ್ರಗಳನ್ನು ಬೆಳಗ್ಗೆ 6-00 ರಿಂದ 10-00 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಯ ಹತ್ತಿರ ಇರುವ ಹೋಟೆಲ್ ಗಳನ್ನು  ಪಾರ್ಸೆಲ್ ಸೇವೆ ಒದಗಿಸಲು ಮಾತ್ರ ತೆರೆಯುವುದು ಉಳಿದ ಎಲ್ಲಾ ಹೋಟೆಲ್ ಗಳ ಸೇವೆಯನ್ನು ನಿಷೇಧಿಸಿದೆ.

ಎಲ್ಲಾ ತರಹದ ವೈದ್ಯಕೀಯ ಸೇವೆಗಳಿಗೆ (ಔಷಧಿ ಅಂಗಡಿಗಳು, ಆ್ಯಂಬುಲೆನ್ಸ್ ಸೇವೆ ಮತ್ತು ಇತ್ಯಾದಿ ತುರ್ತು ವೈದ್ಯಕೀಯ ಸೇವೆ) ವಿನಾಯಿತಿ ನೀಡಲಾಗಿರುತ್ತದೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿತ ಹಾಗೂ ವೈದ್ಯಕೀಯ ಚಟುವಟಿಕೆಗಳ ಸಂಬಂಧಿತ ಹಾಗೂ ಸಪ್ಲೆ ಚೈನ್ ಹೊಂದಿರುವ ಕೈಗಾರಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಹಾಗೂ ಪಿ.ಪಿ.ಇ. ಕಿಟ್ ತಯಾರಿಸುವ ಪ್ಯಾಕ್ಟರಿಯನ್ನು ಮಾತ್ರ ತೆರೆಯಲು ವಿನಾಯಿತಿ ನೀಡಲಾಗಿದೆ.

ರಾಷ್ಟ್ರೀಯ ಮತ್ತು ಪ್ರಮುಖ ಜಿಲ್ಲೆಯ ರಾಜ್ಯ ಹೆದ್ದಾರಿಗಳಲ್ಲಿನ ಪೆಟ್ರೋಲ್ ಬಂಕ್ ಗಳನ್ನು ಹೊರತುಪಡಿಸಿ ಎಲ್ಲಾ ತರಹದ ಪೆಟ್ರೋಲ್ ಬಂಕ್‍ಗಳ ಚಟುವಟಿಕೆಗಳನ್ನು ನಿಷೇಧಿಸಿದೆ.

ಈ ಮೇಲಿನ ಕ್ರಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರನ್ವಯ, ಭಾರತೀಯ ದಂಡ ಸಂಹಿತೆ ಕಲಂ 188 ರನ್ವಯ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ 2020ರ ವಿಭಾಗ 4, 5 ಮತ್ತು 10 ರಂತೆ ಕ್ರಮಗಳನ್ನು ಜರುಗಿಸಲಾಗುವುದು. ದಿನಾಂಕ 30-05-2021ರ  ಆದೇಶದಲ್ಲಿನ  ಕ್ರಮಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪೊಲೀಸ್ ಅಧೀಕ್ಷಕರು, ಚಿಕ್ಕಬಳ್ಳಾಪುರ ಜಿಲ್ಲೆ ರವರಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News