ಯಾರದೋ ಕಾಲು ಹಿಡಿದು ಯಡಿಯೂರಪ್ಪ ಸಿಎಂ ಆದವರಲ್ಲ: ನಳಿನ್ ಕುಮಾರ್ ಕಟೀಲ್

Update: 2021-05-31 13:03 GMT
ಯಡಿಯೂರಪ್ಪ /  ನಳಿನ್ ಕುಮಾರ್ ಕಟೀಲ್

ಬೆಂಗಳೂರು, ಮೇ 31: "ಕಾಂಗ್ರೆಸ್ ನಾಯಕರಂತೆ ಪಕ್ಷಾಂತರ ಮಾಡಿಯೋ, ಯಾರದೋ ಕಾಲು ಹಿಡಿದು ಯಡಿಯೂರಪ್ಪ ಅವರು ಸಿಎಂ ಆದವರಲ್ಲ. ಸಿದ್ದರಾಮಯ್ಯ ಅವರು ತಾವು ಎಲ್ಲಿದ್ದವರು, ತಮ್ಮ ಗುರುಗಳು ಯಾರು ಎಂಬುದನ್ನು ಯೋಚಿಸಬೇಕು. ಕಾಂಗ್ರೆಸ್‍ಗೆ ಹೀನಾಮಾನವಾಗಿ ಬಯ್ಯುತ್ತಿದ್ದ ವ್ಯಕ್ತಿ, ಅದೇ ಪಕ್ಷಕ್ಕೆ ಬಂದು ಸಿಎಂ ಆಗಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, "ಬಿಜೆಪಿ ಸಮರ್ಥ ರಾಜಕೀಯ ಪಕ್ಷ, ನಾಯಕತ್ವದ ಕೊರತೆ ಎದುರಾಗುವುದಿಲ್ಲ. ಅದರಲ್ಲೂ ನಾಯಕತ್ವದ ಪಾಠವನ್ನು ನಾವು ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕಿಲ್ಲ. ಯಡಿಯೂರಪ್ಪ ಅವರು 40ರಿಂದ 45 ವರ್ಷಗಳ ಸುದೀರ್ಘ ಹೋರಾಟ ಮಾಡಿ ಪಕ್ಷವನ್ನು ಬೆಳೆಸಿದ ಕಾರಣದಿಂದಾಗಿಯೇ ಇಂದು ಎತ್ತರದ ಸ್ಥಾನಕ್ಕೆ ಬಂದಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.

"ಸಿದ್ದರಾಮಯ್ಯ ಅವರು ಮೊದಲು ತಮ್ಮ ಪಕ್ಷದ ಸ್ಥಿತಿಗತಿಗಳ ಬಗ್ಗೆ ನೋಡಿಕೊಳ್ಳುವುದು ಒಳ್ಳೆಯದು. ಕಾಂಗ್ರೆಸ್ ಪಕ್ಷದವರಿಗೆ ಸದ್ಯ ಬೇರೆ ಏನೂ ಕೆಲಸವಿಲ್ಲ. ಪ್ರತಿಪಕ್ಷವಾಗಿಯೂ ಸರಿಯಾಗಿ ಕೆಲಸ ಮಾಡದೆ ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆ ಇದೆಯೇ ಹೊರತು ಬಿಜೆಪಿಯಲ್ಲಿ ಅಲ್ಲ. ಸಿದ್ದರಾಮಯ್ಯ ಅವರು ಸಮರ್ಥ ನಾಯಕ ಅಲ್ಲ ಎನ್ನುವುದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು" ಎಂದು ಕಟೀಲ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News