17 ಜನ ಪಕ್ಷಾಂತರಿಗಳ ಕಾಲು ಹಿಡಿದು ಅಧಿಕಾರಕ್ಕೇರಿದ್ದು ಮರೆತುಹೋಯ್ತೆ: ನಳಿನ್ ಕುಮಾರ್ ಗೆ ಕಾಂಗ್ರೆಸ್ ತಿರುಗೇಟು

Update: 2021-05-31 13:16 GMT

ಬೆಂಗಳೂರು, ಮೇ 31: "ಕೆಜೆಪಿ ಪರ್ವದಲ್ಲಿ ಬಿಎಸ್‍ವೈ ಅವರನ್ನ ಹೇಗೆ ನಡೆಸಿಕೊಂಡಿರಿ, ಈಗಲೂ ಅದೇ ಮಾದರಿಯಲ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದೀರಿ ಎಂಬುದನ್ನ ಹೇಳಬೇಕೆ? 17 ಜನ ಪಕ್ಷಾಂತರಿಗಳ ಕಾಲು ಹಿಡಿದು ಅಧಿಕಾರಕ್ಕೇರಿದ್ದು ಮರೆತುಹೋಯ್ತೆ ನಳಿನ್ ಕುಮಾರ್ ಕಟೀಲ್ ಅವರೇ? ಕೆಜೆಪಿಯಲ್ಲಿದ್ದಾಗ ನೀವು ಬಿಎಸ್‍ವೈ ಅವರನ್ನ, ಅವರು ಬಿಜೆಪಿಯನ್ನ ಹೇಗೆಲ್ಲ ಬೈದಾಡಿಕೊಂಡಿದ್ದೀರಿ ನೆನಪಿದೆಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ನಳಿನ್ ಕುಮಾರ್ ಕಟೀಲ್ ಅವರೇ, ಪ್ರತಿಪಕ್ಷವಾಗಿ ಏನು ಮಾಡಬೇಕು ಎಂಬುದನ್ನ ದೇಶ ಕಟ್ಟಿದ ಕಾಂಗ್ರೆಸ್‍ಗೆ ತಾವು ಹೇಳಬೇಕಿಲ್ಲ. ಇತ್ತೀಚಿಗೆ ಹುಟ್ಟಿಕೊಂಡ ತಮ್ಮ ಪಕ್ಷಕ್ಕೆ ಭ್ರಷ್ಟಾಚಾರದ ಹೊರತಾಗಿ ಆಡಳಿತ ತಿಳಿದಿಲ್ಲ ಎನ್ನುವುದು ಕೊರೋನ ನಿರ್ವಹಣೆಯಲ್ಲಿಯೇ ಕಾಣುತ್ತಿದೆ. ನಿಮ್ಮ ಕಚ್ಚಾಟ ರಾಜ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಅದನ್ನು ನಿಭಾಯಿಸಿ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

`ನಳಿನ್ ಕುಮಾರ್ ಕಟೀಲ್ ಅವರೇ, ಯಾರು ಸಮರ್ಥರು ಯಾರು ಅಸಮರ್ಥರು ಎನ್ನುವುದನ್ನ ರಾಜ್ಯ ಕಂಡಿದೆ. ಜನತೆಯ ಬೇಡಿಕೆಗಳಿಗೆ ಕಾಂಗ್ರೆಸ್ ಯಾವತ್ತಿಗೂ `ನೋಟ್ ಪ್ರಿಂಟ್ ಮೆಷಿನ್ ಇಟ್ಟಿಲ್ಲ, ನೇಣು ಹಾಕ್ಕೋಬೇಕಾ, ತಂತಿ ಮೇಲೆ ನಡೆಯುತ್ತಿದ್ದೇನೆ' ಎಂಬಂತಹ ಅಸಹಾಯಕತೆ ವ್ಯಕ್ತಪಡಿಸಲಿಲ್ಲ. ಆಂತರಿಕ ಕಲಹ ನಿಭಾಯಿಸಲಾಗದ ತಾವು ಅಸಮರ್ಥ ಅಧ್ಯಕ್ಷ ಅಲ್ಲವೇ?' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

`ರಾಜ್ಯದ ಜನರ ಹಣವನ್ನು ಜನರಿಗೇ ಮರಳಿಸುವ ಯೋಜನೆಗಳನ್ನು `ಬಿಟ್ಟಿ ಭಾಗ್ಯ' ಎಂದು ಜನರ ಬೆವರಿಗೆ ಅವಮಾನ ಮಾಡುವ ಬಿಜೆಪಿ ನಾಯಕರೇ ಹೇಳಿ, ಜನತೆಯ ಹಣವನ್ನು ಜನತೆಗೆ ನೀಡಲಾಗದೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದಿದ್ದೇಕೇ? ಸಮರ್ಪಕ ಪ್ಯಾಕೇಜ್ ಮೂಲಕ ಜನರ ಹಣ ಮರಳಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಏಕೆ? ಜನರ ಹಣವನ್ನು ಪೂರಾ ನುಂಗಿಬಿಟ್ಟಿರಾ?' ಎಂದು ಕಾಂಗ್ರಸ್ ಪ್ರಶ್ನಿಸಿದೆ.

"ಬಿಜೆಪಿ ಸರಕಾರ ಕಳೆದ ಭಾರಿಯ ಲಾಕ್‍ಡೌನ್ ಪರಿಹಾರ ಘೋಷಣೆ ಮಾಡಿ ಇಂದಿಗೂ ಫಲಾನುಭವಿಗಳಿಗೆ ಹಣ ನೀಡದೆ ಇರುವುದೇಕೆ? ಅನ್ನಭಾಗ್ಯವನ್ನು ಸಿದ್ದರಾಮಯ್ಯ ಅವರು ಮನೆಯಿಂದ ತಂದು ಕೊಟ್ಟರಾ ಎಂದು ಕೇಳುವಾಗ ನಿಮಗೆ ಈ ಪ್ರಜ್ಞೆ ಇರಲಿಲ್ಲವೇ? ಜನತೆಯ ಹಣದಲ್ಲೇ ಜನತೆಗೆ ಉಚಿತ ಲಸಿಕೆ ನೀಡದೆ 900 ರೂ.ಗಳಿಗೆ ಮಾರಿಕೊಳ್ಳುತ್ತಿರುವುದೇಕೆ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News