ಅಕ್ರಮ ಬಂಧನದಲ್ಲಿಟ್ಟಿಲ್ಲ, ನಾನು ಸುರಕ್ಷಿತವಾಗಿದ್ದೇನೆ: ಸೀಡಿ ಪ್ರಕರಣದ ಸಂತ್ರಸ್ತ ಯುವತಿ ಹೈಕೋರ್ಟ್ ಗೆ ಹೇಳಿಕೆ
ಧಾರವಾಡ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಂಬಂಧ ಯುವತಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಸೋಮವಾರ ಇತ್ಯರ್ಥಗೊಳಿಸಿದೆ.
ವಿಡಿಯೋ ಸಂವಾದದಲ್ಲಿ ಹಾಜರಾದ ಸೀಡಿ ಪ್ರಕರಣದ ಸಂತ್ರಸ್ತ ಯುವತಿ ತಾನು ಸುರಕ್ಷಿತವಾಗಿ ಇರುವುದಾಗಿ ಹಾಗೂ ಅಕ್ರಮ ಬಂಧನದಲ್ಲಿ ಇಟ್ಟಿಲ್ಲ ಎಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ತಿಳಿಸಿದರು. ಯುವತಿಯ ಈ ಸ್ಪಷ್ಟೀಕರಣ ಆಲಿಸಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.
ಯುವತಿಯ ತಂದೆ ಧಾರವಾಡ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದ ಕಾರಣ ಯುವತಿ ಇರುವ ಸ್ಥಳಕ್ಕೆ ತೆರಳಲು ರಿಜಿಸ್ಟ್ರಾರ್ ಜನರಲ್‌ಗೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಯುವತಿ ನಿವಾಸಕ್ಕೆ ಭೇಟಿ ನೀಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿ ಮಾತನಾಡಿದರು. ಈ ವೇಳೆ ತನ್ನ ತಂದೆಯೊಂದಿಗೆ ಸಮಾಲೋಚಿಸಲು ಯುವತಿ ನಕಾರ ವ್ಯಕ್ತಪಡಿಸಿದ್ದಾರೆ.
ಎಲ್ಲವೂ ಸರಿ ಹೋದಾಗ ತಂದೆ ಜೊತೆ ಮಾತನಾಡುತ್ತೇನೆ. ಸದ್ಯ ತಂದೆಯೊಂದಿಗೆ ಮಾತನಾಡುವುದಿಲ್ಲ ಎಂದ ಸಂತ್ರಸ್ತ ಯುವತಿ, ಅಕ್ರಮ ಬಂಧನದ ಆರೋಪ ನಿರಾಕರಿಸಿದ್ದಾರೆ. ಹೀಗಾಗಿ ಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಗೊಳಿಸಿತು.
ತಮ್ಮ ಮಗಳು ಕೆಲ ತಿಂಗಳಿಂದ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಯುವತಿಯ ತಂದೆ ಪ್ರಕಾಶ ಕಂಚೇರಿ ಹೈಕೋರ್ಟ್ ಮೊರೆ ಹೋಗಿದ್ದರು.