ಮೃತದೇಹದ ಪಕ್ಕದಲ್ಲೇ ಆಹಾರ ಸೇವನೆ, ಪಿಪಿಇ ಕಿಟ್ ಇಲ್ಲದೆ ಸಂಬಂಧಿಗಳ ಓಡಾಟ: ವೀಡಿಯೊ ವೈರಲ್
ಚಿಕ್ಕಮಗಳೂರು, ಮೇ 31: ಕೊರೋನ ಸೋಂಕಿಗೆ ಬಲಿಯಾದ ವ್ಯಕ್ತಿಯ ಮೃತದೇಹದ ಪಕ್ಕದಲ್ಲೇ ಊಟ, ಉಪಹಾರ ಸೇವಿಸುತ್ತಿರುವ ರೋಗಿಗಳು, ಕೋವಿಡ್ ಸೋಂಕಿತರ ವಾರ್ಡ್‌ನಲ್ಲಿ ಪಿಪಿಇ ಕಿಟ್ ಧರಿಸದೆ ಸೋಂಕಿತರ ಸಂಬಂಧಿಗಳಿಂದ ಓಡಾಟ, ಸೋಂಕಿತರನ್ನು ಸಂಪರ್ಕಿಸಿದ ಸಂಬಂಧಿಗಳಿಂದ ಆಸ್ಪತ್ರೆ ಹೊರಗೆ ಓಡಾಟದ ದೃಶ್ಯಗಳು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೊ ವೈರಲ್ ಆಗಿದೆ.
ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಕೋವಿಡ್ ಆಸ್ಪತ್ರೆ ಇದ್ದು, ಕೋವಿಡ್ ಆಸ್ಪತ್ರೆಯ ವಾರ್ಡ್‌ವೊಂದರಲ್ಲಿ ಸೋಮವಾರ ಬೆಳಗ್ಗೆ ಸೋಂಕಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸೋಂಕಿಗೆ ಬಲಿಯಾದ ವ್ಯಕ್ತಿಯ ಮೃತದೇಹ ಪಕ್ಕದಲ್ಲೇ ಇದ್ದರೂ ಮೃತದೇಹದ ಪಕ್ಕದಲ್ಲೇ ಕುಳಿತ ಸೋಂಕಿತರು ಹಾಗೂ ಅವರ ಸಂಬಂಧಿಗಳು ಆಹಾರ ಸೇವಿಸುವ, ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್‌ನಲ್ಲಿ ಸೋಂಕಿತರ ಸಂಬಂಧಿಗಳು ಪಿಪಿಇ ಕಿಟ್ ಧರಿಸದೆ ತಿರುಗಾಡುವ, ವಾರ್ಡ್ ಒಳಗೆ ಹೋಗಿ ಸೋಂಕಿತರನ್ನು ಮಾತನಾಡಿಸುವ ಸಂಬಂಧಿಗಳು ನಂತರ ವಾರ್ಡ್‌ನಿಂದ ಹೊರ ಬಂದು ಸಾರ್ವಜನಿಕರ ಮಧ್ಯೆ ತಿರುಗಾಡುತ್ತಿರುವ ದೃಶ್ಯಗಳನ್ನು ವಾರ್ಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೊ ಚಿಕ್ಕಮಗಳೂರು ನಗರದ ಕೋವಿಡ್ ಆಸ್ಪತ್ರೆಯದ್ದೇ ಎಂಬುದು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆಗೆ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಆಸ್ಪತ್ರೆಯ ಸೋಂಕಿತರು ಇರುವ ವಾರ್ಡ್‌ಗೆ ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ಪ್ರವೇಶವಿದ್ದು, ಸೋಂಕಿತರ ಸಂಬಂಧಿಗಳಿಗೆ ಪ್ರವೇಶ ನೀಡುತ್ತಿರುವುದು ಹೇಗೆ?, ಪಿಪಿಇ ಕಿಟ್ ಇಲ್ಲದೆ ಸೋಂಕಿತರಿರುವ ವಾರ್ಡ್‌ನಲ್ಲಿ ತಿರುಗಾಡಲು ಅವಕಾಶ ಇದೆಯೇ? ಸೋಂಕಿತರು ಇರುವ ವಾರ್ಡ್‌ನಲ್ಲಿ ಸೋಂಕಿಗೆ ಬಲಿಯಾದ ವ್ಯಕ್ತಿಯ ಮೃತದೇಹದ ಪಕ್ಕದಲ್ಲೇ ಆಹಾರ ಸೇವನೆಗೆ ಅವಕಾಶ ನೀಡಿರುವುದಾದರೂ ಹೇಗೆ ಎಂದು ಸಾರ್ವಜನಿಕರು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಕ್ರಮ’
ಈ ಘಟನೆಯ ವೀಡಿಯೊ ನೋಡಿದ್ದೇನೆ. ಸೋಂಕಿತರ ವಾರ್ಡ್‌ನಲ್ಲಿ ಸಂಬಂಧಿಗಳಿಗೆ ಪ್ರವೇಶವಿಲ್ಲ. ಅಲ್ಲಿನ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಕ್ರಮ ವಹಿಸಲಾಗುವುದು. ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಹೇಳಿದ್ದಾರೆ.