×
Ad

ಕೃಷಿ ಉತ್ಪನ್ನಗಳನ್ನು ಸರಕಾರವೇ ಖರೀದಿಸಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-05-31 20:59 IST

ಹಾವೇರಿ, ಮೇ 31: `ರೈತರು ಬೆಳೆದಿರುವ ಹಣ್ಣು, ಹೂವು, ತರಕಾರಿ ಬೆಳೆಯನ್ನು ಸರಕಾರವೇ ಬೆಂಬಲ ಬೆಲೆ ನೀಡಿ ನೇರವಾಗಿ ಖರೀದಿ ಮಾಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, `ಕೋವಿಡ್ ವಿಚಾರವಾಗಿ ಪಕ್ಷದ ನಾಯಕರು ಜನರಿಗೆ ಹೇಗೆ ಸ್ಪಂದಿಸುತ್ತಿದ್ದಾರೆಂದು ಪರಿಶೀಲಿಸಲು ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದೇನೆ. ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿ, ರೈತರು, ಸವಿತಾ ಸಮಾಜ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬೀದಿ ವ್ಯಾಪಾರಿಗಳು, ಚಾಲಕರು, ಹಮಾಲಿಗಳು ಎಲ್ಲ ವರ್ಗದವರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದ್ದೇನೆ. ರಾಣೆಬೆನ್ನೂರಿನಲ್ಲಿ ಆಹಾರ ಕಿಟ್ ಹಂಚಿದ್ದು, ನಮ್ಮ ನಾಯಕರು ಉತ್ತಮ ಸೇವೆ ಮಾಡುತ್ತಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ನಾನು ಯಾರನ್ನೂ ದೂರಲು ಬಂದಿಲ್ಲ. ನನ್ನ ಪ್ರಕಾರ ಪಕ್ಷದ ಪರವಾಗಿ 200ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಓಡಾಡುತ್ತಿವೆ. ಜೂ.2ರಂದು ಎಐಸಿಸಿ ಸಭೆ ನಡೆಯಲಿದ್ದು, ಎಲ್ಲೆಲ್ಲಿ ಎಷ್ಟು ಸೇವೆ ನೀಡಲಾಗಿದೆ ಎಂದು ಪಟ್ಟಿ ನೀಡುತ್ತೇನೆ. ಬೆಳಗ್ಗೆ ರೈತರನ್ನು ಭೇಟಿ ಮಾಡಿದೆ. ಅಲ್ಲಿನ ರೈತರಿಗೆ ಆನ್‍ಲೈನ್‍ನಲ್ಲಿ ಅರ್ಜಿ ಹಾಕಲು ಗೊತ್ತಿಲ್ಲ. ಹಿಂದಿನ ವರ್ಷದ ಪರಿಹಾರ ಇನ್ನೂ ತಲುಪಿಲ್ಲ. ಸರಕಾರ ಜನರ ಕಣ್ಣೊರೆಸಲು ಪರಿಹಾರ ಘೋಷಿಸಿದೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕೆ.ಜಿ.ಗೆ 40 ರೂ.ಗೆ ಮಾರಾಟ ಮಾಡುತ್ತಿದ್ದ ಹಸಿಮೆಣಸಿನಕಾಯಿ ಈಗ ಒಂದೆರಡು ರೂ.ಗಳಿಗೂ ಕೇಳುವವರಿಲ್ಲ. ಸರಕಾರ ಅವರ ಬೆಳೆಯನ್ನು ಬೆಂಬಲ ಬೆಲೆ ಕೊಟ್ಟು ಖರೀದಿಸುತ್ತಿಲ್ಲ. ಹೀಗಾಗಿ ರೈತರು ಬೆಳೆದ ಹೂವು, ತರಕಾರಿಯನ್ನು ಸರಕಾರವೇ ಖರೀದಿ ಮಾಡಬೇಕು. ಇಲ್ಲ ರೈತರು ತಮ್ಮ ಬೆಳೆ ಮಾರಾಟ ಮಾಡಲು ಕನಿಷ್ಠ 8 ತಾಸು ಕಾಲಾವಕಾಶ ನೀಡಿ. ಕೋವಿಡ್ ಸಮಯದಲ್ಲಿ ಸರಕಾರ ರೈತರನ್ನು ರಕ್ಷಿಸಬೇಕು. ಸರಕಾರ ಮುಂಜಾಗ್ರತೆ ವಹಿಸಲಿಲ್ಲ. ಎಲ್ಲರಿಗೂ ಲಸಿಕೆ ನೀಡಲು ಆಗಿಲ್ಲ. ಪ್ರತಿ ಮನೆಗೂ ಹೋಗಿ ಜನರು ಲಸಿಕೆಗೆ ಆನ್‍ಲೈನ್ ನೋಂದಣಿ ಮಾಡಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.

ಕೋವಿಡ್ ಲಸಿಕೆ ನೀಡಲು ನಾವು 100 ಕೋಟಿ ರೂ.ಕಾರ್ಯಕ್ರಮ ರೂಪಿಸಿದ್ದೇವೆ. ಅದಕ್ಕೆ ಸರಕಾರ ಅನುಮತಿ ನೀಡಲಿ. ನಾವೆಲ್ಲ ಜನರಿಗೆ ಲಸಿಕೆ ಕೊಟ್ಟು ಜೀವ ಉಳಿಸಬೇಕು. ಆಗ ಜಾಗತಿಕ ಟೆಂಡರ್ ಕರೆದರೂ, ಈಗ ಇಲ್ಲ ಎನ್ನುತ್ತಿದ್ದಾರೆ. ನಮ್ಮ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ದೇಸಾಯಿ ಅವರು ಆಕ್ಸಿಜನ್ ಸಿಗದೆ ಮೃತರಾಗಿದ್ದಾರೆ. ನಾನು ಅವರ ಮನೆಗೆ ಹೋದಾಗ ಆತನ ಜತೆ ಐವರು ಆಕ್ಸಿಜನ್ ಇಲ್ಲದೆ ಕೊನೆಯುಸಿರೆಳೆದ ವಿಚಾರ ತಿಳಿಯಿತು. ಈ ರೀತಿ ರಾಜ್ಯದಲ್ಲಿ ಸಾವಿರಾರು ಜನ ಆಕ್ಸಿಜನ್, ಔಷಧಿ ಇಲ್ಲದೆ ಸಾವನ್ನಪ್ಪಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.

ಲಂಚ ಹೊಡೆಯಲು ಸಹಕಾರ ಕೊಡಬೇಕಾ?: `ಸರಕಾರ ದೀಪ ಹಚ್ಚಿ ಎಂದಾಗ, ಚಪ್ಪಾಳೆ ಹೊಡಿ ಎಂದಾಗ, ಅವರ ನಿರ್ಧಾರವನ್ನು ಪಾಲಿಸಿಲ್ಲವೇ? ಇನ್ನೇನು ಸಹಕಾರ ಕೊಡಬೇಕು? ಅವರು ಲಂಚ ಹೊಡೆಯಲು, ಬೆಡ್, ಲಸಿಕೆ ಹಗರಣಕ್ಕೆ, ಔಷಧಿ, ಆಕ್ಸಿಜನ್ ನೀಡದಿರುವುದಕ್ಕೆ ಸಹಕಾರ ನೀಡಬೇಕಾ?' ಎಂದು ಡಿ.ಕೆ.ಶಿವಕುಮಾರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪ್ರಕರಣದಿಂದ ಹೊರಬರುತ್ತಾರೆಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಏನೇನಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ವಿಚಾರವಾಗಿ ಇಡೀ ರಾಜ್ಯದುದ್ದಗಲಕ್ಕೆ ಹೋರಾಟ ಸ್ವರೂಪದ ಬಗ್ಗೆ ನಂತರ ಹೇಳುತ್ತೇನೆ. ಇದು ವ್ಯಕ್ತಿಯ ವಿಚಾರವಲ್ಲ. ದೇಶದ ಕಾನೂನು, ಹೆಣ್ಣಿನ ರಕ್ಷಣೆ ವಿಚಾರ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News