ಇನ್ನೂ 15 ದಿನ ಲಾಕ್‍ಡೌನ್ ವಿಸ್ತರಣೆ ಒಳ್ಳೆಯದು: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಮೇ 31: `ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಹೇರಿರುವ ಲಾಕ್‍ಡೌನ್ ಅನ್ನು ಇನ್ನು ಸ್ವಲ್ಪ ದಿನ ಮುಂದುವರಿಸುವುದು ಒಳ್ಳೆಯದು. ಈಗಲೂ ಪಾಸಿಟಿವಿಟಿ ದರ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದ್ದು, ಆತಂಕ ಮನೆ ಮಾಡಿದೆ. ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಐದು ಸಾವಿರ ಪ್ರಕರಣಗಳು ಬರುತ್ತಿವೆ. ಹೀಗಾಗಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಇನ್ನೂ 15ರಿಂದ 20 ದಿನ ಲಾಕ್‍ಡೌನ್ ವಿಸ್ತರಣೆ ಮಾಡಬೇಕು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಒದಗಿಸಲು ಎರಡನೇ ಹಂತದ ಪ್ಯಾಕೇಜ್ ನೀಡಲು ಸರಕಾರ ಮುಂದಾಗಿದೆ. ಮೊದಲ ಹಂತದಲ್ಲಿ 1,250 ಕೋಟಿ ರೂ. ಘೋಷಣೆ ಮಾಡಲಾಗಿದ್ದು, ಬಹುಶಃ ಸಂಪೂರ್ಣವಾಗಿ ಜನಸಾಮಾನ್ಯರಿಗೆ ತಲುಪುವ ನಿರೀಕ್ಷೆ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಕಳೆದ ಬಾರಿ ಘೋಷಣೆ ಮಾಡಿದ ಪ್ಯಾಕೇಜ್ ಪೂರ್ಣ ಜನರಿಗೆ ತಲುಪಿಲ್ಲ. ಇನ್ನು, ರಾಜ್ಯದಲ್ಲಿ ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲ. ಹೊರ ನೋಟದಲ್ಲಿ ಸರಕಾರ ಏನು ಬೇಕಾದರೂ ಹೇಳಬಹುದು. ಆದರೆ, ರಾಜ್ಯದ ಜನತೆ ಸರಕಾರದ ಬೊಕ್ಕಸ ತುಂಬುವುದರಲ್ಲಿ ಶ್ರಮಿಸುತ್ತಿದ್ದಾರೆ. ಅವರು ಸಂಕಷ್ಟದಲ್ಲಿದ್ದು, ಅದನ್ನು ಬಗೆಹರಿಸಲು ದೊಡ್ಡಮಟ್ಟದ ಪ್ಯಾಕೇಜ್ ನೀಡಬೇಕು. ಈ ವಿಚಾರದಲ್ಲಿ ರಾಜಿ ಸರಿಯಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಸಂಕಷ್ಟದಲ್ಲಿರುವ ಜನರ ಸಮಸ್ಯೆಗೆ ಸ್ಪಂದಿಸಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು. ಹೀಗಾಗಿ ಎಲ್ಲ ವರ್ಗದ ಜನರಿಗೆ 10-15 ಸಾವಿರ ರೂ.ನೀಡಬೇಕು. ಇದರಿಂದ ಯಾವುದೇ ರೀತಿಯಲ್ಲಿಯೂ ಸರಕಾರಿ ಖಜಾನೆ ಖಾಲಿಯಾಗುವುದಿಲ್ಲ. ಹೀಗಾಗಿ ಸರಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು ಸರಕಾರ ಜವಾಬ್ದಾರಿ ಎಂದರು.
ಹಣ ಲೂಟಿ: ರಸ್ತೆ ಸೇರಿ ಇನ್ನಿತರ ಕಾಮಗಾರಿಗಳಿಗೆ ಗುತ್ತಿಗೆದಾರರಿಂದ ಕಿಕ್‍ಬ್ಯಾಕ್ ಪಡೆದು ಅವಕಾಶ ಕೊಡಲಾಗುತ್ತಿದೆ ಮತ್ತು ಕೋವಿಡ್, ಬ್ಲ್ಯಾಕ್ ಫಂಗಸ್ ಸೇರಿದಂತೆ ಇತರೆ ಕಾಯಿಲೆಗಳಿಗೆ ಔಷಧಿ ಸಹಿತ ಸೌಕರ್ಯಗಳನ್ನು ಒದಗಿಸುವ ವಿಚಾರದಲ್ಲಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ರೈತರು, ಬಡವರು, ಕೂಲಿಕಾರ್ಮಿಕರು ಸರಕಾರಕ್ಕೆ ತೆರಿಗೆ ರೂಪದಲ್ಲಿ ನೀಡುವ ಹಣದಲ್ಲಿ ಕಮಿಷನ್ ಸಿಗುವುದಿಲ್ಲ. ಹೀಗಾಗಿ ಅವರು ಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸರಕಾರ ಹಣ ಲೂಟಿ ಮಾಡುವ ಕೆಲಸ ಬಿಟ್ಟು ಸಂಕಷ್ಟಕ್ಕೊಳಗಾಗಿರುವ ಜನತೆಗೆ ಪ್ಯಾಕೇಜ್ ನೀಡುವ ಕೆಲಸ ಮಾಡಬೇಕು. ಈ ಸರಕಾರ ಎಲ್ಲದರಲ್ಲೂ ಹಣ ಲೂಟಿ ಮಾಡುತ್ತಿದೆ. ಕೂಡಲೇ ಅವುಗಳನ್ನು ನಿಲ್ಲಿಸಿ, ಕೋವಿಡ್ ಮತ್ತು ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಜನರಿಗೆ ಸರಕಾರ ನೆರವಾಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.