ವಕೀಲ, ಜನಪರ ಹೋರಾಟಗಾರ ಹೂವಪ್ಪ ನಿಧನ

Update: 2021-05-31 16:28 GMT

ಚಿಕ್ಕಮಗಳೂರು: ಜಿಲ್ಲೆಯ ಜನಪರ ಹೋರಾಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ವಕೀಲ, ಪ್ರಗತಿಪರ ಚಿಂತಕ, ಹೋರಾಟಗಾರ ಕೂದುವಳ್ಳಿ ಗ್ರಾಮದ ಹೂವಪ್ಪ(48) ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕೋಮು ಸೌಹಾರ್ದ ವೇದಿಕೆ, ಜಾತಿ ವಿನಾಶ ವೇದಿಕೆಯಂತಹ ಪ್ರಗತಿಪರ ಸಂಘಟನೆಗಳ ಸದಸ್ಯರಾಗಿದ್ದ ಅವರು ಸುಮಾರು 25 ವರ್ಷಗಳಿಂದ ಚಿಕ್ಕಮಗಳೂರು ನಗರದಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ವಕೀಲಿ ವೃತ್ತಿಯೊಂದಿಗೆ ಜನಪರ ಹೋರಾಟಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರು, ಜಿಲ್ಲೆಯಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟ, ಆದಿವಾಸಿ, ದಲಿತರ ಸಮಸ್ಯೆಗಳ ಸಂಬಂಧ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಕೋಮುಸೌಹಾರ್ದ ವೇದಿಕೆ, ಜಾತಿ ವಿನಾಶವೇದಿಕೆ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ಅವರು ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಹಲವು ಸಮಾವೇಶ, ಕಾರ್ಯಾಗಾರ, ಹೋರಾಟಗಳನ್ನು ಸಂಘಟಿಸಿದ್ದರು. ಜಿಲ್ಲೆಯಲ್ಲಿ ನಕ್ಸಲ್ ಚಳವಳಿ ಪರ ನಿಲುವು ಹೊಂದಿದ್ದ ಅವರು, ದಲಿತರು, ಆದಿವಾಸಿಗಳ ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ನೇಹಜೀವಿಯಾಗಿದ್ದ ಅವರು ಇತ್ತೀಚಿನ ಕೆಲ ವರ್ಷಗಳಿಂದ ಎಲ್ಲ ರೀತಿಯ ಹೋರಾಟಗಳಿಂದ ತಟಸ್ಥರಾಗಿದ್ದು, ವಕೀಲಿ ವೃತ್ತಿಯಲ್ಲೇ ಮುಂದುವರಿದಿದ್ದರು.

ಕೆಲ ದಿನಗಳ ಹಿಂದೆ ಕೋವಿಡ್‍ಗೆ ತುತ್ತಾಗಿದ್ದ ವಕೀಲ ಹೂವಪ್ಪ ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಸೋಮವಾರ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

ಹೂವಪ್ಪ ಅವರು ಪತ್ನಿ, ಇಬ್ಬರು ಮಕ್ಕಳು ಹಾಗು ಅಪಾರ ಬಂಧುಗಳನ್ನು ಅಗಲಿದ್ದು, ಅವರ ಹಠಾತ್ ನಿಧನಕ್ಕೆ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಮುಖಂಡರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News