ಮೈಸೂರು: ಲಾಕ್ ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಿ ಆತ್ಮಹತ್ಯೆ
ಮೈಸೂರು,ಮೇ.31: ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನಿಂದ ಕಂಗೆಟ್ಟ ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮುಖಿ ದೇವಸ್ಥಾನದ ರಸ್ತೆಯ ನಿವಾಸಿ ಅನಿಲ್ ಎಂಬವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ತೀರಾ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಪರಿಚಯಸ್ಥರ ಬಳಿ ಸಾಲ ಪಡೆದುಕೊಂಡಿದ್ದರು. ಲಾಕ್ ಡೌನ್ ನಿಂದ ಸಾಲ ತೀರಿಸಲಾಗದೆ ಪರದಾಡುತ್ತಿದ್ದರು. ಸಾಲ ನೀಡಿದವರು ಮನೆಯ ಬಳಿ ಬಂದು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಇದರಿಂದ ತೀವ್ರ ನೊಂದಿದ್ದ ಅವರು ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಪತಿಯನ್ನು ಕಳೆದುಕೊಂಡ ಪತ್ನಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಡಿ ಠಾಣೆಯ ಇನ್ಸಪೆಕ್ಟರ್ ನಾರಾಯಣ ಸ್ವಾಮಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.