ಲಾಕ್‍ಡೌನ್ ಜಾರಿ ಹಿನ್ನೆಲೆ: ಪರಿಹಾರಕ್ಕೆ ಅರ್ಜಿ ಸಲ್ಲಿಸಿದ 1.27 ಲಕ್ಷ ಚಾಲಕರು

Update: 2021-05-31 17:38 GMT

ಬೆಂಗಳೂರು, ಮೇ 31: ಲಾಕ್‍ಡೌನ್ ಸಂಬಂಧಿಸಿದಂತೆ ರಾಜ್ಯ ಸರಕಾರ ಘೋಷಿಸಿರುವ 3 ಸಾವಿರ ರೂ. ಪರಿಹಾರ ಪಡೆಯಲು ರಾಜ್ಯಾದ್ಯಂತ 1.27 ಲಕ್ಷ ಚಾಲಕರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. 

ಆರ್ಥಿಕ ಸಂಕಷ್ಟದಲ್ಲಿರುವ ಆಟೋ, ಕ್ಯಾಬ್ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರಕಾರ, 2.10 ಲಕ್ಷ ಚಾಲಕರಿಗೆ ತಲಾ ಮೂರು ಸಾವಿರ ರೂ. ಪರಿಹಾರ ಘೋಷಿಸಿದೆ. 

ಅದರಂತೆ ಸೇವಾಸಿಂಧು ವೆಬ್‍ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 1.27 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 72,256 ಆಟೋ ಚಾಲಕರು, 48,196 ಟ್ಯಾಕ್ಸಿ ಚಾಲಕರು ಹಾಗೂ 7,361 ಮ್ಯಾಕ್ಸಿ ಕ್ಯಾಬ್ ಚಾಲಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈ 1.27 ಲಕ್ಷ ಅರ್ಜಿಗಳ ಪೈಕಿ 1.10 ಲಕ್ಷ ಅರ್ಜಿಗಳು ಪರಿಹಾರ ಮೊತ್ತ ನೀಡಲು ಅನುಮೋದನೆ ಪಡೆದಿವೆ. ಈ ಅರ್ಜಿಗಳನ್ನು ಡೈರೆಕ್ಟ್ ಬೆನಿಫಿಟ್ ಪೇಮೆಂಟ್(ಡಿಬಿಟಿ) ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು: ಈಗಾಗಲೇ ಸಲ್ಲಿಕೆಯಾಗಿರುವ ಒಟ್ಟು 1.27 ಲಕ್ಷ ಅರ್ಜಿಗಳ ಪೈಕಿ ಅತಿ ಹೆಚ್ಚು ಬೆಂಗಳೂರು ನಗರ ಜಿಲ್ಲೆ 56,701 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ ಮೈಸೂರು 8,404, ದಕ್ಷಿಣ ಕನ್ನಡ 6,848, ತುಮಕೂರು 6,819, ಮಂಡ್ಯ 4,740, ಹಾಸನ 3,420, ಉಡುಪಿ 3,014, ದಾವಣಗೆರೆ 2,989, ರಾಮನಗರ 2,971, ಬೆಂಗಳೂರು ಗ್ರಾಮಾಂತರ 2,787, ಬೆಳಗಾವಿ 2,592, ಕಲಬುರಗಿ 2,549, ಚಿತ್ರದುರ್ಗ 2,410, ಶಿವಮೊಗ್ಗ 2,366, ಚಿಕ್ಕಮಗಳೂರು 1,990, ಬಳ್ಳಾರಿ 1,764, ಕೋಲಾರ 1,585, ಕೊಡಗು 1,391, ಚಿಕ್ಕಬಳ್ಳಾಪುರ 1,287, ಹಾವೇರಿ 1,072, ರಾಯಚೂರು 7,98, ಬಾಗಲಕೋಟೆ 784, ಕೊಪ್ಪಳ 673, ಬೀದರ್ 580, ಗದಗ 477 ಹಾಗೂ ಯಾದಗಿರಿಯಿಂದ 469 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವರದಿಯಾಗಿದೆ.

ಸಂಘಗಳ ಖಂಡನೆ: ರಾಜ್ಯ ಸರಕಾರ ಬರೀ ಮೂರು ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿರುವುದಕ್ಕೆ ಚಾಲಕರ ಸಂಘದ ಮುಖಂಡರು ಖಂಡಿಸಿದ್ದಾರೆ. ನೆರವು ಸಾಕಾಗುವುದಿಲ್ಲ, ಲಾಕ್‍ಡೌನ್‍ನಿಂದಾಗಿ ಭಾರೀ ಆರ್ಥಿಕ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಅದು ಅಲ್ಲದೆ, ಕಳೆದ ವರ್ಷದ ಮೇ ನಲ್ಲಿ 7.5 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ.ಗಳ ಪರಿಹಾರವನ್ನು ಸರಕಾರ ಘೋಷಿಸಿತ್ತು. ಆದರೆ, ಸರಕಾರದಲ್ಲಿ ನೋಂದಣಿ ಮಾಡಿಕೊಂಡಿದ್ದ ಕೇವಲ 2.1 ಲಕ್ಷ ಫಲಾನುಭವಿಗಳಿಗೆ ಹಣವನ್ನು ವಿತರಿಸಲಾಗಿದೆ ಎಂದು ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News