×
Ad

ಯೂಟ್ಯೂಬ್‍ನಲ್ಲಿ ಕರ್ನಾಟಕ ಹೈಕೋರ್ಟ್ ಕಲಾಪ ನೇರ ಪ್ರಸಾರ

Update: 2021-05-31 23:31 IST

ಬೆಂಗಳೂರು, ಮೇ 31: ಕರ್ನಾಟಕ ಹೈಕೋರ್ಟ್ ನ್ಯಾಯಾಂಗ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕೋರ್ಟ್ ಕಲಾಪವನ್ನು ಯೂಟ್ಯೂಬ್‍ನಲ್ಲಿ ನೇರ ಪ್ರಸಾರ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಚಾರಣೆ ಸೋಮವಾರದಿಂದಲೇ ಯೂಟ್ಯೂಬ್‍ನಲ್ಲಿ ನೇರಪ್ರಸಾರವಾಯಿತು. 

ನ್ಯಾಯಾಲಯದ ಕಲಾಪಗಳು ಸಾರ್ವಜನಿಕ ವೀಕ್ಷಣೆಗೂ ಲಭ್ಯವಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಈ ಬೇಡಿಕೆಯನ್ನು ಜಾರಿಗೊಳಿಸಲು ಸ್ವತಃ ಸುಪ್ರೀಂಕೋರ್ಟ್ ಇಚ್ಚಿಸಿತ್ತು. ಅದರಂತೆ, ಇ-ಕೋರ್ಟ್ ಕಲಾಪಗಳ ಕುರಿತು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದರನ್ವಯ ಇದೀಗ ರಾಜ್ಯ ಹೈಕೋರ್ಟ್ ತನ್ನ ಕಲಾಪನ್ನು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಿದೆ.

ಮೇ 31ರ ಮಧ್ಯಾಹ್ನ 2.40ರ ಸುಮಾರಿಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ ಬೈತಕೊಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಹಾಗೂ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗಿದೆ.

ಪ್ರಾಯೋಗಿಕ ನೇರ ಪ್ರಸಾರವಿದ್ದ ಕಾರಣ ಎರಡು ಪ್ರಕರಣಗಳನ್ನಷ್ಟೇ ನೇರ ಪ್ರಸಾರದಲ್ಲಿ ವಿಚಾರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕರಣಗಳನ್ನು ನೇರ ಪ್ರಸಾರದ ಮೂಲಕ ವಿಚಾರಣೆ ನಡೆಸಲು ಹೈಕೋರ್ಟ್ ಇಚ್ಚಿಸಿರುವುದಾಗಿ ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಗುಜರಾತ್ ಹೈಕೋರ್ಟ್‍ನಲ್ಲಿ ಪ್ರಾಯೋಗಿಕವಾಗಿ ಕಲಾಪದ ನೇರ ಪ್ರಸಾರ ಮಾಡಲಾಗಿದೆ. ಇದೀಗ ಕರ್ನಾಟಕ ಹೈಕೋರ್ಟ್‍ನಿಂದ ನೇರ ಪ್ರಸಾರ ಮಾಡುವ ಮಹತ್ವದ ಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ರೂಪಿಸಿರುವುದೇ ಸಾರ್ವಜನಿಕರಿಗಾಗಿ, ಹೀಗಾಗಿ ಯಾವುದೇ ಸಾಂವಿಧಾನಿಕ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಗೆ ಬದ್ದವಾಗಿ ಕಾರ್ಯ ನಿರ್ವಹಿಸಬೇಕು ಎಂದು ಈ ಹಿಂದಿನ ಕಾರ್ಯಕ್ರಮವೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. https://www.youtube.com/watch?v=p-4vySjlTYY

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News