ಮೈಸೂರು ಜಿಲ್ಲಾಡಳಿತ ನೀಡುವ ಕೋವಿಡ್ ಸಾವಿನ ಲೆಕ್ಕದಲ್ಲಿ ನನಗೂ ಅನುಮಾನವಿದೆ: ಸಂಸದ ಪ್ರತಾಪ್ ಸಿಂಹ
ಮೈಸೂರು, ಜೂ.1: ಜಿಲ್ಲಾಡಳಿತ ನೀಡುತ್ತಿರುವ ಕೊರೋನ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುವ ಮೂಲಕ ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಪ್ರತಿದಿನ ಹಲವು ತಾಲೂಕು ಮತ್ತು ಊರುಗಳಿಗೆ ಹೋಗುತ್ತಿರುತ್ತೇವೆ, ಅಲ್ಲಿ ಅವರು ಸತ್ತರು, ಇವರು ಸತ್ತರು ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಜಿಲ್ಲಾಡಳಿತದ ಲೆಕ್ಕಕ್ಕೂ ಅಂತ್ಯ ಸಂಸ್ಕಾರ ಮಾಡಿರುವ ಲೆಕ್ಕಕ್ಕೂ ಬಹಳ ವ್ಯತ್ಯಾಸವಿದೆ. ಈ ಬಗ್ಗೆ ನನಗೂ ಅನುಮಾನ ಇದೆ ಎಂದು ಪರೋಕ್ಷವಾಗಿ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು.
ಕೊರೋನ ಸಂಬಂಧ ಎಷ್ಟು ಖರ್ಚು ಮಾಡಲಾಗಿದೆ ಲೆಕ್ಕ ಕೊಡಿ ಎಂದು ಕೇಳಿದ್ದೆ. ಅವರು ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರ ನೀವೇ ನಿರ್ಧಾರ ಮಾಡಿ ಎಂದು ಮಾಧ್ಯಮರಿಗೆ ಹೇಳಿದರು.
ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಇದ್ದಾಗ ಪಾರದರ್ಶಕತೆ ಇತ್ತು, ಹಾಗಾಗಿ ಅವರನ್ನು ಲೆಕ್ಕ ಕೇಳಲಿಲ್ಲ. ಆದರೆ ಈಗಿರುವ ಜಿಲ್ಲಾಧಿಕಾರಿಯಲ್ಲಿ ಆ ವ್ಯವಸ್ಥೆ ಕಾಣುತ್ತಿಲ್ಲ, ಹಾಗಾಗಿ ಲೆಕ್ಕ ಕೇಳಬೇಕಾಯಿತು. ಇವರು ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರ ಎಂದು ಸಂಸದರು ಪ್ರಶ್ನಿಸಿದರು.
ಯಾವುದ್ಯಾವುದಕ್ಕೋ 1, 2, 3, 4 ಕೋಟಿ ರೂ. ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಸತ್ವ ಇದೆಯ?, ಯಾವುದಕ್ಕೆ ಎಷ್ಟು ಕೊಡಲಾಗಿದೆ ಎಂದು ತಿಳಿಸಬೇಕಲ್ಲವಾ? ದಾನಿಗಳು ಊಟ ತಿಂಡಿ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಆದರೆ ಇವರು ಊಟದ ಲೆಕ್ಕ ತೋರಿಸಿದ್ದಾರೆ. ಯಾರಿಗೆ ನೀಡಲಾಯಿತು ಎಂಬುದು ಬೇಕಲ್ಲವೇ ಎಂದು ಹೇಳಿದರು.
ಕೆ.ಆರ್.ಆಸ್ಪತ್ರೆ ಆವತಣದಲ್ಲಿ ಶಾಶ್ವತವಾದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ:
ಪಿಎಂ ಕೇರ್ಸ್ ನಿಧಿಯಲ್ಲಿ ಕೆ.ಆರ್. ಆಸ್ಪತ್ರೆಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಈ ಸಂಬಂಧ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆ.ಆರ್. ಆಸ್ಪತ್ರೆ ಅತೀ ದೊಡ್ಡ ಆಸ್ಪತ್ರೆ. ಇಲ್ಲಿಗೆ ಚಿಕಿತ್ಸೆಗಾಗಿ ದಿನಕ್ಕೆ ನೂರಾರು ಜನ ಬರುತ್ತಾರೆ. ಸುಮಾರು ಐದು ನೂರಕ್ಕೂ ಹೆಚ್ವು ಬೆಡ್ ಗಳು ಇವೆ. ಹಾಗಾಗಿ ಶಾಸ್ವತವಾದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.
ಸುಮಾರು 1 ಕೋಟಿ ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲು ಮುಂದಾಗಿದ್ದು, ಜೂನ್ ಅಂತ್ಯದ ಒಳಗೆ ಕಾಮಗಾರಿ ಮುಗಿದು ಕಾರ್ಯ ರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ನಮ್ಮಲ್ಲಿ ಆಕ್ಸಿಜನ್ ಬೆಡ್ ಗೆ ಕೊರತೆ ಇಲ್ಲ, ಆದರೆ ಐಸಿಯು, ವರಂಟಿಲೇಟರ್ ಬೆಡ್ ಗಳ ಕೊರತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ನಿಗಾವಹಿಸಿದ್ದು. ಆದಷ್ಟು ಬೇಗ ಐಸಿಯು ಬೆಡ್ ಗಳ ಹೆಚ್ಚಳ ಮಾಡಲಾಗುವುದು ಹಾಗೆ ವೆಂಟಿಲೇಟರ್ ಗಳನ್ನು ಹೆಚ್ಚಿಸುವುದಾಗಿ ಹೇಳಿದರು.