ಲಾಕ್‍ಡೌನ್ ನಂತರ ಪ್ರಾರಂಭವಾಗುವ ಸಾರಿಗೆ ಸೇವೆಗೆ ಎರಡು ಡೋಸ್ ಪಡೆದ ಸಿಬ್ಬಂದಿಗೆ ಮೊದಲ ಆದ್ಯತೆ: ಡಿಸಿಎಂ ಸವದಿ

Update: 2021-06-01 12:35 GMT

ಬೆಂಗಳೂರು, ಜೂ. 1: ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್‍ಡೌನ್ ಮುಗಿದ ನಂತರ ಪ್ರಾರಂಭವಾಗುವ ಸಾರಿಗೆ ಸೇವೆಗೆ ಎರಡನೇ ಸುತ್ತಿನ ಕೋವಿಡ್ ಲಸಿಕೆ ಪಡೆದಂತಹ ಚಾಲಕರು ಮತ್ತು ನಿರ್ವಾಹಕರನ್ನೇ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸ್ಪಷ್ಟಪಡಿಸಿದ್ದಾರೆ. 

ಮಂಗಳವಾರ ಶಾಂತಿನಗರದಲ್ಲಿ ಬಿಎಂಟಿಸಿಯ ಸಿಬ್ಬಂದಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಯಲ್ಲಿ ಒಟ್ಟು ಸುಮಾರು 31 ಸಾವಿರ ಸಿಬ್ಬಂದಿಗಳಿದ್ದು, ಇವರಲ್ಲಿ ಈಗಾಗಲೇ ಸುಮಾರು 19 ಸಾವಿರ ಮಂದಿಗೆ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಉಳಿದವರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್ ಮುಗಿದ ನಂತರ ಕರ್ತವ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ ಎರಡು ಸುತ್ತಿನ ಲಸಿಕೆಯನ್ನು ನೀಡಿದ್ದಲ್ಲಿ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದಲೂ ಸುರಕ್ಷಿತವಾಗುತ್ತದೆ. ನಾಲ್ಕೂ ಸಾರಿಗೆ ನಿಗಮಗಳಲ್ಲಿ ಇದೇ ರೀತಿಯ ಉಚಿತ ಲಸಿಕೆ ನೀಡುವ ಅಭಿಯಾನವನ್ನು ಏರ್ಪಡಿಸಲಾಗುತ್ತಿದೆ. ಇವುಗಳ ಪ್ರಯೋಜನವನ್ನು ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.

ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಲಾಕ್ ಡೌನ್ ಅವಧಿಯನ್ನು ಎಲ್ಲಿಯವರೆಗೆ ಜಾರಿಯಲ್ಲಿರಬೇಕು ಎಂಬುದನ್ನು ಶೀಘ್ರವೇ ನಿರ್ಧರಿಸಲಾಗುವುದು. ಲಾಕ್‍ಡೌನ್ ಅವಧಿಯ ಬಗ್ಗೆ ಸರಕಾರ ಅಂತಿಮವಾಗಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬ ಆಧಾರದ ಮೇಲೆ ಸಾರಿಗೆ ಸಂಸ್ಥೆಗಳ ಸೇವೆಯನ್ನು ಪುನಃ ಪ್ರಾರಂಭಿಸಲಾಗುವುದು.  ಆದ್ದರಿಂದ ಸಾರಿಗೆ ಬಸ್ಸುಗಳ ಸಂಚಾರವನ್ನು ಯಾವಾಗ ಪುನರ್ ಪ್ರಾರಂಭಿಸಲಾಗುತ್ತದೆ ಎಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. 

ಈ ವೇಳೆ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ, ಬಿಎಂಟಿಸಿ ಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News