ಸರಕಾರವೇ ರೈತರ ಬೆಳೆ ಖರೀದಿ ಮಾಡಲಿ: ಡಿ.ಕೆ.ಶಿವಕುಮಾರ್

Update: 2021-06-01 12:17 GMT

ಬೆಂಗಳೂರು, ಜೂ. 1: `ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿಗಳನ್ನು ಸರಕಾರವೇ ರೈತರಿಂದ ನೇರವಾಗಿ ಖರೀದಿ ಮಾಡಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕೆ.ಜಿಗೆ 40-50ಕ್ಕೆ ಮಾರುತ್ತಿದ್ದ ಹಸಿಮೆಣಸಿನಕಾಯಿಯನ್ನು ರೈತರು ಒಂದೆರಡು ರೂ.ಗೆ ಮಾರುತ್ತಿದ್ದಾರೆ. ಕೆಲವರು ಹೊಲದಲ್ಲೆ ಗೊಬ್ಬರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ 2 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಹೂವು, ಹಣ್ಣು, ತರಕಾರಿ ಬೆಳೆಯುವ ಎಲ್ಲ ರೈತರ ಪರಿಸ್ಥಿತಿ ದಯನೀಯವಾಗಿದೆ. ಹೀಗಾಗಿ ನಾನು ಅಲ್ಲಿಗೆ ಹೋಗಿ, ಅವರ ಸಂಕಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಮುಂದೆಯೂ ಹೋಗುತ್ತೇನೆ. ಅವರ ಧ್ವನಿಯಾಗಲು ನಿರ್ಧರಿಸಿದ್ದೇವೆ ಎಂದರು.

ಸರಕಾರದ ಪ್ಯಾಕೇಜ್ ಜನರಿಗೆ ತಲುಪುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಿಮ್ಮ ಕೃಷಿ, ತೋಟಗಾರಿಕಾ ಸಚಿವಾಲಯದಿಂದ ರೈತರ ಬೆಳೆ ನೇರವಾಗಿ ಖರೀದಿ ಮಾಡಿ. ಬೆಂಬಲ ಬೆಲೆಯನ್ನು ನೀವೆ ನಿರ್ಧರಿಸಿ. ಒಂದು ತಿಂಗಳು ತಡವಾಗಿ ಹಣ ಕೊಟ್ಟರೂ ಪರವಾಗಿಲ್ಲ. ಆದರೆ, ಬೇಗ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸರಕಾರ ಮೊದಲು ಖರೀದಿ ಮಾಡಬೇಕು ಎಂದು ಆಗ್ರಹಿಸಿದ ಅವರು, ನಿಮ್ಮ ಪ್ಯಾಕೇಜ್ ಪ್ರಕಾರ ಕುಂಟೆಗೆ 100 ರೂ.ಪರಿಹಾರ ಸಿಗುತ್ತದೆ. ಸಣ್ಣ ರೈತರು ಈ ಅಲ್ಪ ಮೊತ್ತಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಹಾಕಿಕೊಂಡು ಕೂರಲ್ಲ. ಹೀಗಾಗಿ ನೀವು ಒಂದು ತಂಡ ರಚಿಸಿ ಬೆಳೆ ಖರೀದಿ ಮಾಡಿ. ನೀವು ಮಾರಾಟ ಮಾಡುವ ಬೆಲೆಯಲ್ಲಿ ಅರ್ಧದಷ್ಟನ್ನು ರೈತರಿಗೆ ಕೊಡಿ ಎಂದು ಸಲಹೆ ಮಾಡಿದರು.

ನಕಲಿ ಪ್ಯಾಕೇಜ್: ಸಂಕಷ್ಟದಲ್ಲಿರುವ ಜನರಿಗೆ ಸರಕಾರ ನೀಡುವ ರಿಯಲ್ ಪ್ಯಾಕೇಜ್ ಇದಲ್ಲ. 25 ಲಕ್ಷ ಮಂದಿ ಚಾಲಕ ವೃತ್ತಿ ಅವಲಂಬಿಸಿದ್ದಾರೆ. ಸವಿತಾ ಸಮಾಜ, ನೇಕಾರರು ಹೀಗೆ ಅಸಂಘಟಿತ ಕಾರ್ಮಿಕರಲ್ಲಿ ಎಷ್ಟು ಜನ ಅರ್ಜಿ ಹಾಕಿದ್ದಾರೆ.
ಸರಕಾರ ನಿಜವಾಗಿ ನೊಂದವರ ರಕ್ಷಣೆ ಮಾಡುತ್ತಿಲ್ಲ. ಮೊದಲು ಇವರ ರಕ್ಷಣೆಗೆ ಕಾರ್ಯಕ್ರಮ ರೂಪಿಸಿ. ವರ್ತಕರಿಗೆ ಒಂದು ವರ್ಷದಿಂದ ಸರಿಯಾಗಿ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಆದರೆ, ಪಾಲಿಕೆ ಮಾತ್ರ ತೆರಿಗೆ ಪಾವತಿಗೆ ಪೀಡಿಸುತ್ತಿದೆ. ಅವರು ಹೇಗೆ ಕಟ್ಟುತ್ತಾರೆ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಥಿಯೇಟರ್ ಮಾಲಕರು ಯಾವ ತೆರಿಗೆ ಕಟ್ಟುತ್ತಾರೆ. ಮದ್ಯದಂಗಡಿಗೆ 10 ಗಂಟೆವರೆಗೂ ಅವಕಾಶ ಕೊಟ್ಟರೆ, ರೈತನಿಗೆ ಬೆಳಗ್ಗೆ 8ಗಂಟೆ ವರೆಗೂ ಮಾತ್ರ ಅವಕಾಶ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಸಮಯ ಅಂಗಡಿ ಬಾಗಿಲು ತೆಗೆದು, ಮುಚ್ಚಲು ಸಾಕಾಗುತ್ತದೆ. ಇನ್ನು ವ್ಯಾಪಾರ ಮಾಡುವುದು ಹೇಗೆ? ಎಂದು ಕೇಳಿದ ಶಿವಕುಮಾರ್, ಬಡವರಿಗೆ ನೆರವಾಗಲು ಆಹಾರ ಕಿಟ್ ನೀಡುವಂತೆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಅದರಂತೆ ಎಲ್ಲ ಕಡೆಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದರು.

ಸಂಸದರಿಂದ ಗಾಂಧಿ ತತ್ವ ಪಾಲನೆ: ರಾಜ್ಯದ ಸಂಸದರು ಗಾಂಧಿ ತತ್ವ ಅನುಸರಿಸುತ್ತಿದ್ದಾರೆ. ಕಣ್ಣು, ಕಿವಿ, ಬಾಯಿಯನ್ನು ಬಂದ್ ಮಾಡಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿಯೂ ಅವರ್ಯಾರು ರಾಜ್ಯದ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ' ಎಂದು ಶಿವಕುಮಾರ್ ಇದೇ ವೇಳೆ ಲೇವಡಿ ಮಾಡಿದರು.

"ದೇವೇಗೌಡರು ಪ್ರಧಾನಿಯಾಗಿ 25 ವರ್ಷವಾಗಿದೆ. ಇದು ರಾಜ್ಯಕ್ಕೆ ದೊಡ್ಡ ಗೌರವ. ಯಾರಿಗೂ ಇಂತಹ ದೊಡ್ಡ ಅವಕಾಶ ಸಿಕ್ಕಿಲ್ಲ. ಅವರು ತಮಗೆ ಸಿಕ್ಕಿದ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಕೆಲಸ ಮಾಡಿದ್ದಾರೆ. ಉತ್ತರದವರು ದಕ್ಷಿಣ ಭಾರತೀಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೂ, ದೇವೇಗೌಡರು ತಮ್ಮ ಹೋರಾಟದಿಂದ ಆ ಎತ್ತರದ ಸ್ಥಾನ ತಲುಪಿದ್ದಾರೆ. ಅವರು ಆ ಸ್ಥಾನ ಅಲಂಕರಿಸಿದಾಗ ನಾವೆಲ್ಲ ಪಕ್ಷಭೇದ ಮರೆತು ಸಂತೋಷಪಟ್ಟೆವು. ಅವರ ಮಾರ್ಗದರ್ಶನ ರಾಜ್ಯಕ್ಕೆ ಬೇಕು"
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ


`ಆರೋಗ್ಯ ಸಚಿವ ಡಾ.ಸುಧಾಕರಣ್ಣಾ ಮೊದಲು ಜನರಿಗೆ ಕೋವಿಡ್ ಲಸಿಕೆ ಕೊಡಿಸುವತ್ತ ಗಮನ ಹರಿಸಲಿ. ಪಂಚಾಯ್ತಿ, ಕಂದಾಯ ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಯಾರು ಸತ್ತಿದ್ದಾರೆ ಎಂದು ಗೊತ್ತಿದೆ. ಡೆತ್ ಆಡಿಟ್ ಮಾಡಲಿ. ನೀನು ಮೊದಲು ಬೆಡ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಿ, ಲಸಿಕೆ ಕೊಡುವತ್ತ ಗಮನ ಹರಿಸು.. ಡೆತ್ ಆಡಿಟ್ ಕೆಲಸ ನಿನ್ನ ಕೈಯಲ್ಲಿ ಆಗೋಲ್ಲ. ಮೊದಲು ಈ ಕೆಲಸಗಳನ್ನು ಮಾಡು'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News