ಲಾಕ್‍ಡೌನ್ ಏಕಾಏಕಿ ಅನ್‍ಲಾಕ್ ಮಾಡುವುದು ಬೇಡ: ಡಿಸಿಎಂ ಲಕ್ಷ್ಮಣ ಸವದಿ

Update: 2021-06-01 12:28 GMT

ಬೆಂಗಳೂರು, ಜೂ. 1: `ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ಹೇರಿರುವ ಲಾಕ್‍ಡೌನ್ ಅನ್ನು ಏಕಕಾಲಕ್ಕೆ ಅನ್‍ಲಾಕ್ ಮಾಡುವುದು ಬೇಡ. ಹಂತ-ಹಂತವಾಗಿ ಅನ್‍ಲಾಕ್ ಮಾಡುವುದು ಒಳ್ಳೆಯದು' ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಲಹೆ ಮಾಡಿದ್ದಾರೆ.

ಮಂಗಳವಾರ ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಆಶ್ರಯದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಎರಡನೆಯ ಹಂತದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಲಾಕ್‍ಡೌನ್ ಮಾಡಿದ್ದರಿಂದ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿದೆ. ಅನ್‍ಲಾಕ್ ಬಗ್ಗೆ ತಜ್ಞರ ಜತೆ ನಾಳೆ ಸಮಾಲೋಚನೆ ಮಾಡಲಾಗುವುದು. ಆ ನಂತರ ಅಂತಿಮ ತೀರ್ಮಾನವಾಗಲಿದೆ ಎಂದರು.

ತಜ್ಞರ ಅಭಿಪ್ರಾಯ ಪಡೆದ ಬಳಿಕ ಲಾಕ್‍ಡೌನ್ ಮುಂದುವರೆಸಬೇಕೆ ಅಥವಾ ತೆರವು ಮಾಡಬೇಕೆ ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಜೂ.7ರೊಳಗೆ ಸೋಂಕಿನ ಪ್ರಮಾಣ ರಾಜ್ಯದಲ್ಲಿ 5 ಸಾವಿರದ ಒಳಗೆ ಬಂದರೆ ಮಾತ್ರ ಅನ್‍ಲಾಕ್ ಮಾಡಬಹುದು. ಸೋಂಕು ಕಡಿಮೆ ಆಗದಿದ್ದರೆ ಅನ್‍ಲಾಕ್ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಕೊರೋನ ಸೋಂಕಿನಿಂದ ಸಾವನ್ನಪ್ಪಿದ ಸಾರಿಗೆ ಇಲಾಖೆ ಸಿಬ್ಬಂದಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಪರಿಹಾರ ನೀಡಲು ಸರಕಾರ ಬದ್ಧವಿದೆ. ರಾಜ್ಯದಲ್ಲಿ ರೆಮ್‍ಡೆಸಿವಿರ್ ಮೆಡಿಸಿನ್ ಕೊರತೆ ಇಲ್ಲ. ಬ್ಲ್ಯಾಕ್ ಫಂಗಸ್ ಮೆಡಿಸನ್ ಕೊರತೆ ಇದೆ. ವ್ಯಾಕ್ಸಿನ್ ನೀಡುವ ಬಗ್ಗೆ ಕೇಂದ್ರ ಸರಕಾರ ಮತ್ತು ಕೇಂದ್ರ ಸಚಿವ ಸದಾನಂದ ಗೌಡರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

'ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಲಾಕ್‍ಡೌನ್ ಅವಧಿಯನ್ನು ಎಲ್ಲಿಯವರೆಗೆ ಜಾರಿಯಲ್ಲಿರಬೇಕು ಎಂಬುದನ್ನು ಶೀಘ್ರವೇ ನಿರ್ಧರಿಸಲಾಗುವುದು. ಲಾಕ್‍ಡೌನ್ ಅವಧಿಯ ಬಗ್ಗೆ ಸರಕಾರ ಅಂತಿಮವಾಗಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬ ಆಧಾರದ ಮೇಲೆ ಸಾರಿಗೆ ಸಂಸ್ಥೆಗಳ ಸೇವೆಯನ್ನು ಪುನಃ ಪ್ರಾರಂಭಿಸಲಾಗುವುದು'
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News