ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಗೋಣಿಬೀಡು ಪಿಎಸ್ಸೈ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಚಿಕ್ಕಮಗಳೂರು, ಜೂ.1: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಪಿಎಸ್ಸೈ ಅರ್ಜುನ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ಜಿಲ್ಲಾ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ಕಳೆದ ಮೇ 10ರಂದು ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಸೈ ಅರ್ಜುನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಿರುಗುಂದ ಗ್ರಾಮದ ದಲಿತ ಸಮುದಾಯದ ಯುವಕ ಪುನೀತ್ ಎಂಬಾತನನ್ನು ಠಾಣೆಗೆ ಕರೆದೊಯ್ದು ಹಗ್ಗದಿಂದ ಕಟ್ಟಿ ಹಾಕಿ ಮೂತ್ರ ಕುಡಿಸಿದ್ದರೆಂದು ಆರೋಪಿಸಿ ಪುನೀತ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ.
ಈ ಪ್ರಕರಣ ಸಂಬಂಧ ಪಶ್ಚಿಮ ವಲಯದ ಐಜಿಪಿ ಪಿಎಸ್ಸೈ ಅರ್ಜುನ್ ಅವರನ್ನು ಅಮಾನತು ಮಾಡಿದ್ದು, ಪಿಎಸ್ಸೈ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ ಈ ಪ್ರಕರಣ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ಹಿನ್ನೆಲೆಯಲ್ಲಿ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಅಟ್ರಾಸಿಟಿ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಪಿಎಸ್ಸೈ ಅರ್ಜುನ್ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದು, ಚಿಕ್ಕಮಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ವಕೀಲ ಸುಧಾಕರ್ ಎಂಬವರ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯ ವಿಚಾರಣೆ ಮೇ 28ರಂದು ನಡೆದಿದ್ದು, ವಿಚಾರಣೆ ವೇಳೆ ಪುನೀತ್ ಪ್ರಕರಣದ ಸರಕಾರಿ ಅಭಿಯೋಜಕಿ ಪಿಎಸ್ಸೈ ಅರ್ಜುನ್ ಅವರಿಗೆ ಜಾಮೀನು ನೀಡುವುದರ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆಯನ್ನು ಜೂ.1ಕ್ಕೆ ಮುಂದೂಡಿದ್ದರು.
ಮಂಗಳವಾರ ಈ ಪ್ರಕರಣ ಸಂಬಂಧದ ವಿಚಾರಣೆ ವೇಳೆ ಪುನೀತ್ ಪರ ವಕೀಲ ವಾದ ಮಂಡಿಸಿ, ಆರೋಪಿ ಪೊಲೀಸ್ ಅಧಿಕಾರಿಯಾಗಿದ್ದು, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಪ್ರಭಾವಿಯಾಗಿದ್ದಾರೆ. ಇವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದಲ್ಲಿ ತಮ್ಮ ಪ್ರಭಾವ ಬಳಸಿ ಸಂತ್ರಸ್ಥನಿಗೆ ಕಿರುಕುಳ ನೀಡುವ ಸಾಧ್ಯತೆ ಹೆಚ್ಚಿದೆ. ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯೂ ಇದ್ದು, ಆರೋಪಿಗೆ ಜಾಮೀನು ಮಂಜೂರು ಮಾಡಬಾರದೆಂದು ವಾದ ಮಂಡಿಸಿದ್ದರು.
ಬಳಿಕ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಕೆ.ಎಲ್.ಅಶೋಕ್ ವಕೀಲರು ಮಂಡಿಸಿದ ಆಧಾರದ ಮೇಲೆ ಪಿಎಎಸ್ಸೈ ಅರ್ಜುನ್ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆಂದು ತಿಳಿದು ಬಂದಿದೆ.