ತರೀಕೆರೆ: ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Update: 2021-06-01 15:02 GMT

ಚಿಕ್ಕಮಗಳೂರು, ಜೂ.1: ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ವೈದ್ಯರ ಮೇಲೆ ರವಿವಾರ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತರೀಕೆರೆ ಪಟ್ಟಣದ ಬಸವೇಶ್ವರ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ದೀಪಕ್ ಮೇಲೆ ರವಿವಾರ ಮಧ್ಯಾಹ್ನ ಅಪರಿಚಿತರು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ಡಾ.ದೀಪಕ್ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯ ಪ್ರಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ತರೀಕೆರೆ ಪೊಲೀಸರು ಸೋಮವಾರ ಆರೋಪಿಗಳಾದ ವೇಣು, ನಿತಿನ್, ವೆಂಕಟೇಶ್, ಚಂದ್ರಶೇಖರ್ ಎಂಬರನ್ನು ಬಂಧಿಸಿದ್ದು, ಈ ಆರೋಪಿಗಳು ಮಗು ಸಾವಿನ ಪ್ರಕರಣ ಸಂಬಂಧ ಪ್ರತಿಕಾರಕ್ಕಾಗಿ ಈ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. 

ಜ್ವರದಿಂದ ಬಳಲುತ್ತಿದ್ದ ಅಜ್ಜಂಪುರ ತಾಲೂಕಿನ ತಗಡ ಗ್ರಾಮದ ಬಾಲಕ ಭುವನ್(9)ನನ್ನು  ಪೋಷಕರು ತರೀಕೆರೆ ಪಟ್ಟಣದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು. ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಾಲಕ ಭುವನ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಭುವನ್ ಮೇ 29ರಂದು ಮೃತಪಟ್ಟಿದ್ದಾನೆ.

ಮಕ್ಕಳ ತಜ್ಞ ಡಾ.ದೀಪಕ್, ಭುವನ್‍ಗೆ ಓವರ್‍ಡೋಸ್ ಇಂಜಕ್ಷನ್ ನೀಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇದೇ ಕಾರಣದಿಂದ ಮಗುವಿನ ಸಂಬಂಧಿಗಳು ಸೋಮವಾರ ಡಾ.ದೀಪಕ್ ಮೇಲೆಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಹಲ್ಲೆಯಿಂದ ಡಾ. ದೀಪಕ್ ಗಂಭೀರ ಗಾಯಗೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News