ನನ್ನನ್ನು ಖಳನಾಯಕನಾಗಿ ಮಾಧ್ಯಮಗಳು ಬಿತ್ತರಿಸುತ್ತಿರುವುದು ನೋವುಂಟು ಮಾಡಿದೆ: ಸಚಿವ ಸಿ.ಪಿ.ಯೋಗೇಶ್ವರ್
ಮೈಸೂರು,ಜೂ.1: ನಾನು ಸಿನಿಮಾದಲ್ಲೂ ನಾಯಕನಾಗಿದ್ದವನು, ರಾಜಯಕೀಯದಲ್ಲೂ ನಾಯಕನಾಗಿದ್ದೇನೆ. ಆದರೆ ನನ್ನನ್ನು ಒಬ್ಬ ಖಳನಾಯಕನಾಗಿ ಮಾಧ್ಯಮಗಳು ಬಿತ್ತರಿಸುತ್ತಿರುವುದು ನೋವುಂಟು ಮಾಡಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ನಗರದ ಸುತ್ತೂರು ಮಠಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನೀಡಿದ ವೈಯಕ್ತಿಕ ಅಭಿಪ್ರಾಯಕ್ಕೆ ಕಳೆದ ಮೂರು ದಿನಗಳಿಂದ ಮಾಧ್ಯಮಗಳು ನನ್ನನ್ನು ಒಬ್ಬ ಖಳನಾಯಕನಾಗಿ ಬಿತ್ತರಿಸುತ್ತಿವೆ. ನಾನು ಸಿನಿಮಾದಲ್ಲೂ ನಾಯಕನಾಗಿದ್ದವನು, ರಾಜಕೀಯದಲ್ಲೂ ನಾಯಕನಾಗಿದ್ದೇನೆ. ಕೆಲವು ಸ್ನೇಹಿತರು ನನ್ನ ಬಗ್ಗೆ ಆಡುತ್ತಿರುವ ಮಾತುಗಳು ಪ್ರಚೋದನೆಯಿಂದ ಕೂಡಿದ್ದು ಎಂಬ ನೋವಿತ್ತು. ಸ್ವಾಮೀಜಿಗಳ ಬಳಿ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ ಎಂದು ಬಂದಿರುವುದಾಗಿ ಹೇಳಿದರು.
ಬಹಳ ವರ್ಷಗಳಿಂದ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿದ್ದೆನೆ. ಸ್ವಾಮೀಜಿ ಅವರ ಬಳಿ ಮಾತನಾಡಿದರೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ ಎಂದರು.