ಕೊರೋನ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ ಎಂದ ಸಂಸದ ಪ್ರತಾಪ್ ಸಿಂಹ

Update: 2021-06-01 17:52 GMT

ಮೈಸೂರು,ಜೂ.1: ಜಿಲ್ಲಾಡಳಿತ ನೀಡುತ್ತಿರುವ ಕೊರೋನ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುವ ಮೂಲಕ ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಪ್ರತಿ ದಿನ ಹಲವು ತಾಲ್ಲೂಕು ಮತ್ತು ಊರುಗಳಿಗೆ ಪ್ರವಾಸ ಹೋಗುತ್ತಿರುತ್ತೇವೆ. ಅಲ್ಲಿನ ಜನರು ಅವರು ಸತ್ತರು ಇವರು ಸತ್ತರು ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಜಿಲ್ಲಾಡಳಿತದ ಲೆಕ್ಕಕ್ಕೂ ಅಂತ್ಯ ಸಂಸ್ಕಾರ ಮಾಡಿರುವ ಲೆಕ್ಕಕ್ಕೂ ಬಹಳ ವ್ಯತ್ಯಾಸವಿದೆ. ಈ ಬಗ್ಗೆ ನನಗೂ ಅನುಮಾನ ಇದೆ ಎಂದು ಪರೋಕ್ಷವಾಗಿ ಜಿಲ್ಲಾದಿಕಾರಿಗಳ ವಿರುದ್ಧ ಹರಿಹಾಯ್ದರು.

ಕೊರೋನ ಸಂಬಂಧ ಎಷ್ಟು ಖರ್ಚು ಮಾಡಲಾಗಿದೆ ಲೆಕ್ಕ ಕೊಡಿ ಎಂದು ಕೇಳಿದ್ದೆ. ಅವರು ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರ ನೀವೆ ನಿರ್ಧಾರ ಮಾಡಿ ಎಂದು ಮಾಧ್ಯಮದವರಿಗೆ ಹೇಳಿದರು.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇದ್ದಾಗ ಪಾರದರ್ಶಕತೆ ಇತ್ತು. ಹಾಗಾಗಿ ಅವರಲ್ಲಿ ಲೆಕ್ಕ ಕೇಳಲಿಲ್ಲ. ಆದರೆ ಈಗಿರುವ ಜಿಲ್ಲಾಧಿಕಾರಿಗಳಲ್ಲಿ ಆ ವ್ಯವಸ್ಥೆ ಕಾಣುತ್ತಿಲ್ಲ. ಹಾಗಾಗಿ ಲೆಕ್ಕ ಕೇಳಿದ್ದೇನೆ. ಇವರು ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ತಿಳಿಸಬೇಕಲ್ಲವೇ? ದಾನಿಗಳು ಊಟ ತಿಂಡಿ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಇವರು ಊಟದ ಲೆಕ್ಕ ತೋರಿಸಿದ್ದಾರೆ. ಯಾರಿಗೆ ಊಟ ನೀಡಲಾಯಿತು ಎಷ್ಟು ಖರ್ಚಾಗಿದೆ ಎಂಬುದು ಬೇಕಲ್ಲವ ಎಂದು ಪ್ರಶ್ನಿಸಿದರು. 

ನಾನು ಸ್ಟೆಪ್ ಡೌನ್ ಆಸ್ಪತ್ರೆಗಳ ಲೆಕ್ಕ ಕೇಳಿದ್ದೆ ಅದನ್ನು ಕೊಟ್ಟಿದ್ದಾರಾ, ಸ್ವಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ ಅದನ್ನು ಕೊಟ್ಟಿದ್ದಾರ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News