ಮಂಡ್ಯ, ಮಡಿಕೇರಿಗೆ ಅಮೆರಿಕದ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಅವರಿಂದ ವೈದ್ಯಕೀಯ ನೆರವು
ಮಂಡ್ಯ, ಜೂ.1: ಅಮೆರಿಕದ ಆರೋಗ್ಯ ಸಚಿವಾಲಯದಲ್ಲಿ ವೈಸ್ ಅಡ್ಮಿರಲ್ ನಂತಹ ಪ್ರಮುಖ ಹುದ್ದೆ ಹೊಂದಿರುವ ಭಾರತೀಯ ಸಂಜಾತ ವಿವೇಕ್ ಮೂರ್ತಿ ಕೋವಿಡ್ ಹಿನ್ನಲೆಯಲ್ಲಿ ತಾಯ್ನಾಡಿನ ಆಸ್ಪತ್ರೆಗಳಿಗೆ ಅಗತ್ಯ ನೆರವಿನ ಹಸ್ತ ಚಾಚಿದ್ದಾರೆ. ಅಮೆರಿಕದ ಜನರಲ್ ಸರ್ಜನ್ ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಗ್ರಾಮದ ಡಾ.ವಿವೇಕ್ ಮೂರ್ತಿ ತಮ್ಮ ಸ್ಕೋಪ್ ಫೌಂಡೇಶನ್ ಇಂಡಿಯಾ ವತಿಯಿಂದ ಕಳುಹಿಸಿರುವ ವೈದ್ಯಕೀಯ ಪರಿಕರಗಳನ್ನು ಅವರ ಚಿಕ್ಕಪ್ಪ ವಸಂತ್ ಕುಮಾರ್ ಮಂಡ್ಯ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು.
50 ಆಕ್ಸಿಜನ್ ಕಾನ್ಸನ್‍ಟ್ರೇಟರ್, 1.96 ಲಕ್ಷ ಎನ್.95 ಮಾಸ್ಕ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರಿಗೆ ಹಸ್ತಾಂತರ ಮಾಡಿದ ವಸಂತ್‍ಕುಮಾರ್, ಮಂಡ್ಯ ಜಿಲ್ಲೆಗೆ 74 ಲಕ್ಷ ರೂ. ಹಾಗೂ ಮಡಿಕೇರಿಗೆ 67 ಲಕ್ಷ ರೂ. ಮೌಲ್ಯದ ಪರಿಕರನ್ನು ಮೂರ್ತಿ ಅವರು ನೀಡಿದ್ದಾರೆ ಎಂದರು.
ಸಾಮಾಜಿಕ ಸೇವಾ ಉದ್ದೇಶದ ತಮ್ಮ ಸಂಸ್ಥೆಯಾದ ಸ್ಕೋಪ್ ಮೂಲಕ ಇದೀಗ ಭಾರತದ ಕೆಲವು ಸಣ್ಣ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿರುವ ಡಾ. ವಿವೇಕ್ ಮೂರ್ತಿ ಇದಕ್ಕಾಗಿ ಮಡಿಕೇರಿ, ಮಂಡ್ಯ, ಮಳವಳ್ಳಿ, ಮದ್ದೂರು, ನಾಗಮಂಗಲ ಸೇರಿದಂತೆ ರಾಜ್ಯದ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ದಾನಿಗಳು ವೈದ್ಯಕೀಯ ನೆರವು ನೀಡಿ ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆಂದು ಅಭಿನಂದಿಸಿದರು.
ಜಿಲ್ಲೆಯಲ್ಲಿ 26 ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಸೆಂಟರ್‍ಗಳಾಗಿ ಪರಿವರ್ತಿಸಲಾಗಿದೆ. ಸುಮಾರು 15 ಸಾವಿರ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಆದ್ದರಿಂದ ಕೋವಿಡ್ ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಆಗದೇ ಕೋವಿಡ್ ಸೆಂಟರ್‍ಗಳಿಗೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ವಿಜಯ ಕುಮಾರ್, ಮುಡಾ ಅಧ್ಯಕ್ಷ ಶ್ರೀನಿವಾಸ್, ಜಿಪಂ ಸಿಇಒ ದಿವ್ಯಾಪ್ರಭು, ಮಿಮ್ಸ್ ನಿರ್ದೇಶಕ ಎಂ.ಆರ್.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.