ಎಸೆಸೆಲ್ಸಿ, ಪಿಯು ಪರೀಕ್ಷೆ ಬದಲಿಗೆ ಶಾಲಾ-ಕಾಲೇಜು ಹಂತದಲ್ಲಿ ಮೌಲ್ಯಾಂಕನವಾಗಲಿ: ನಿರಂಜನಾರಾಧ್ಯ

Update: 2021-06-02 14:33 GMT

ಬೆಂಗಳೂರು, ಜೂ. 2: ರಾಜ್ಯದಲ್ಲಿ ಕೋವಿಡ್ ಆತಂಕ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರಕಾರ ಎಸೆಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿ, ವಿದ್ಯಾರ್ಥಿಗಳ ಹಿಂದಿನ ಸಾಮರ್ಥ್ಯಗಳ ಕುರಿತು ಲಭ್ಯವಿರುವ ಮಾಹಿತಿಯನ್ನು ಆಧರಿಸಿ, ಆಯಾ ಶಾಲಾ-ಕಾಲೇಜು ಹಂತದಲ್ಲಿಯೇ ಮೌಲ್ಯಾಂಕನವನ್ನು ಮುಗಿಸುವುದು ಸೂಕ್ತ ನಿರ್ಧಾರವಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಬಿಎಸ್ಸಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ರಾಜ್ಯ ಸರಕಾರ ಇದೇ ರೀತಿಯ ನಿರ್ಧಾರಕ್ಕೆ ಬರುವುದು ಸೂಕ್ತವೆಂದು ತಿಳಿಸಿದ್ದಾರೆ.

ಕಂಠಪಾಠ ಆಧರಿಸಿದ ಕಾಟಾಚಾರದ ಪರೀಕ್ಷೆಗಳನ್ನು ನಡೆಸಿ ಅಂಕಗಳ ಮೂಲಕ ವಿದ್ಯಾರ್ಥಿಗಳ ಹಣೆಬರಹವನ್ನು ಬರೆದು ಶಾಲಾ-ಕಾಲೇಜುಗಳಲ್ಲಿ ಸೀಟನ್ನು ಗಿಟ್ಟಿಸುವುದನ್ನೇ ಕಲಿಕೆಯೆಂದು ಬಿಂಬಿಸುವ ಬದಲು, ವಿದ್ಯಾರ್ಥಿಗಳ ಕಲಿಕೆಯನ್ನು ಹಲವು ಆಯಾಮಗಳಿಂದ ವೈಜ್ಞಾನಿಕವಾಗಿ ಮೌಲ್ಯಾಂಕನ ಮಾಡಿ ಕಲಿಕೆಯಲ್ಲಿರುವ ಅಂತರ ಮತ್ತು ತೊಡಕುಗಳನ್ನು ನಿವಾರಿಸುವ ಸಾಧನವನ್ನಾಗಿಸುವ ಮತ್ತು ಕಲಿಕೆಯನ್ನು ಗುಣಾತ್ಮಕವಾಗಿ ಸುಧಾರಿಸುವ ಹೊಸ  ಪ್ರಕ್ರಿಯೆಗಳು ಪ್ರಾರಂಭವಾಗಬೇಕೆಂದು ಅವರು ಆಶಿಸಿದ್ದಾರೆ.

ಮಕ್ಕಳು ತರಗತಿಯಿಂದ ತರಗತಿಗೆ ದಾಟುವ ಮುನ್ನ ಆಯಾ ತರಗತಿ ಮತ್ತು ಆಯಾ ವಯಸ್ಸಿನ ಬೌದ್ಧಿಕ ಹಾಗು ಮಾನಸಿಕ ಬೆಳವಣಿಗೆಯನ್ನು ಪರಿಪೂರ್ಣವಾಗಿ ಅರಳಿಸುವ  ಮತ್ತು ನಿಜವಾಗಿಯು ಜ್ಞಾನವನ್ನು ಕಟ್ಟಿಕೊಡುವ ಹೊಸ ಸಾಧನಗಳ ಬಗ್ಗೆ ಆಲೋಚಿಸಬೇಕು. ಕಳೆದ 15 ತಿಂಗಳಲ್ಲಿ ಕಲಿಕೆಯಲ್ಲಿ ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಹೊಸ ಬಗೆಯ ಕಾರ್ಯತಂತ್ರಗಳನ್ನು ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಎಸೆಸೆಲ್ಸಿ, ಪಿಯುಸಿ ಪರೀಕ್ಷಾ ಮಂಡಳಿಗಳು ಪರೀಕ್ಷೆಗಳ ರದ್ಧತಿಯನ್ನು ನಕಾರಾತ್ಮಕವಾಗಿ ನೋಡುವ ಬದಲು ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸುವ ಇದು ಸದಾವಕಾಶವೆಂದು ಭಾವಿಸಿ ಮುಂದೆ ಹೋಗಬೇಕು. ಈ ನಿಟ್ಟಿನಲ್ಲಿ ಸರಕಾರ ಶೀಘ್ರವಾಗಿ ತನ್ನ ತೀರ್ಮಾನವನ್ನು ಪ್ರಕಟಿಸುವುದು ಮಕ್ಕಳ ಹಾಗೂ ಪಾಲಕರಲ್ಲಿ ಮೂಡಿರುವ ಅನಗತ್ಯ ಆತಂಕ ಮತ್ತು ಅನಿಶ್ಚಿತತೆಯನ್ನು ತೊಡೆದುಹಾಕಲು ಮಹತ್ವದ ನಿರ್ಧಾರವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News