'ದಲಿತರಿಗೆ ಲಸಿಕೆ ನಿರಾಕರಣೆ' ಎಂಬ ಹರಿಪ್ರಸಾದ್ ಆರೋಪದ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ ಪ್ರತಿಕ್ರಿಯೆ

Update: 2021-06-02 14:57 GMT

ಬೆಂಗಳೂರು, ಜೂ.2: ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ಕ್ಷೇತ್ರದ ಶಾಸಕರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಳ್ಳಿಹಾಕಿದ್ದಾರೆ. 

ಈ ಬಗ್ಗೆ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, 'ಇದೊಂದು ಬೇಜವಾಬ್ದಾರಿ ಹೇಳಿಕೆ. ಅವರಿಗೆ ಜಾತಿ- ಧರ್ಮದ ಹೆಸರೇಳದಿದ್ದರೆ ನಿದ್ದೆಯೇ ಬರಲ್ಲ. ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ಹೇಗಾದರೂ ಹಳಿತಪ್ಪಿಸಬೇಕು ಎಂಬ ಷಡ್ಯಂತ್ರ ಅವರು ಇಟ್ಟುಕೊಂಡಿರುವಂತಿದೆ' ಎಂದು ತಿರುಗೇಟು ನೀಡಿದರು.

“ಲಸಿಕೆಯಲ್ಲಿ ಜಾತಿ ತರುವ ಕೆಲಸವನ್ನು ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಮಾಡಿಲ್ಲ. ಅಂಥ ಯಾವುದೇ ಘಟನೆ ಕ್ಷೇತ್ರದಲ್ಲಿ ನಡೆದಿಲ್ಲ. ಯಾರಿಗೂ ಲಸಿಕೆ ನಿರಾಕರಿಸಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. 

ಅಂಕಿ- ಅಂಶ: ದಾನಿಗಳ ನೆರವಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಕೊಳೆಗೇರಿಗಳಲ್ಲಿ ವಾಸಿಸುವ 1,000ಕ್ಕೂ ಹೆಚ್ಚು ಬಡವರಿಗೆ, ಆರ್ಥಿಕ ದುರ್ಬಲರಿಗೆ ಲಸಿಕೆ ಕೊಡಿಸಿದ್ದೇನೆ. ಅಲ್ಲದೆ 9,000 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ 7 ಸ್ಲಂಗಳ ಜನರೇ ಹೆಚ್ಚು ಇದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು. 

ಮಲ್ಲೇಶ್ವರಂನ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂದು ಹರಿಪ್ರಸಾದ್ ದೂರಿದ್ದಾರೆ. ಇದು ಶುದ್ಧ ಸುಳ್ಳು. ಅಂದು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರೂ, ಅವರ ಆರೈಕೆ ಮಾಡುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಸರಕಾರ ಹೊರಡಿಸಿರುವ ಈ ಮಾರ್ಗಸೂಚಿ ಪ್ರಕಾರ ಯಾರೇ ಬಂದರೂ ಲಸಿಕೆ ಹಾಕಿ ಕಳಿಸಲಾಗುತ್ತಿದೆ. ಪ್ರತಿಯೊಬ್ಬರ ಆಧಾರ್ ಸಂಖ್ಯೆ ದಾಖಲಿಸಿಕೊಂಡು ವ್ಯಾಕ್ಸಿನ್ ನೀಡಲಾಗುತ್ತಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಮೇಲೆ ಜಾತಿ ನಮೂದಾಗಿರುವುದಿಲ್ಲ ಎಂಬ ಅಂಶವನ್ನು ಹರಿಪ್ರಸಾದ್ ಗಮನಿಸಬೇಕು ಎಂದು ಅವರು ತಿರುಗೇಟು ನೀಡಿದರು. 

ವೈರಸ್ ಗೆ ಜಾತಿ- ಧರ್ಮದ ಹಂಗಿಲ್ಲ. ಅದೇ ರೀತಿ ವ್ಯಾಕ್ಸಿನ್ ಗೆ ಇರುವುದಿಲ್ಲ. ಇದನ್ನು ಹರಿಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅವರು ಸರಕಾರಕ್ಕೆ ಸಲಹೆಗಳನ್ನು ನೀಡಿ ಉತ್ತೇಜಿಸಬೇಕೆ ಹೊರತು ಆಗುತ್ತಿರುವ ಕೆಲಸದಲ್ಲಿ ಕಲ್ಲು ಹುಡುಕಿ ನೈತಿಕ ಸ್ಥೈರ್ಯ ಕುಗ್ಗಿಸಬಾರದು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಜಾತಿ-ಧರ್ಮದಂಥ ಸೂಕ್ಷ್ಮ ಸಂಗತಿಗಳನ್ನು ತರಬಾರದು. ಇವರಿಗೆ ನಾಚಿಕೆಯಾಗಬೇಕು. ಜನ ಪಾಠ ಕಲಿಸಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ಹಾಗಾದರೆ ಇವರ ಪ್ರಕಾರ ಅರ್ಚಕರಿಗೆ ಲಸಿಕೆ ಕೊಡುವ ಹಾಗಿಲ್ಲವೆ? ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News