ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆಯಾಗಲಿದೆಯೇ ?: ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದು ಹೀಗೆ...

Update: 2021-06-02 15:31 GMT

ಬೆಂಗಳೂರು, ಜೂ. 2: ಕೋವಿಡ್ ಎರಡಲೆ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಹೇರಿರುವ ಲಾಕ್‍ಡೌನ್ ಅನ್ನು ಜೂ.7ರ ಬಳಿಕವೂ ವಿಸ್ತರಣೆ ಸಂಬಂಧ ಜೂ.5 ಅಥವಾ 6ರಂದು ತಜ್ಞ ವೈದ್ಯರು ಹಾಗೂ ಸಂಪುಟ ಸಚಿವರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ, `ಕೋವಿಡ್ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಲಾಕ್‍ಡೌನ್ ವಿಸ್ತರಣೆ ಮುನ್ಸೂಚನೆ ನೀಡಿದ್ದಾರೆ.

ಬುಧವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೋವಿಡ್ 19ರ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದರು. ಆಕ್ಸಿಜನ್ ಎಲ್ಲಿ ಹೆಚ್ಚಾಗಿದೆ ಎಲ್ಲಿ ಕಡಿಮೆ ಬೇಡಿಕೆ ಇದೆ ಎನ್ನುವುದರ ಮೇಲೆ ನಿಗಾವಹಿಸಿ ಆಕ್ಸಿಜನ್‍ಅನ್ನು ಜಿಲ್ಲಾವಾರು ಹಂಚಿಕೆ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಿದರು.

ಕೋವಿಡ್ ವೈರಸ್ ಸೋಂಕು ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸುವಂತೆ ಸೂಚನೆ ನೀಡಲಾಯಿತು. ಅಲ್ಲದೆ, ಬ್ಲ್ಯಾಕ್ ಫಂಗಸ್ ಪೆಟಾಲಿಟಿ ಹೆಚ್ಚಾಗಿದ್ದು ಅದನ್ನು ನಿಯಂತ್ರಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು ಎಂದು ಗೊತ್ತಾಗಿದೆ.

ಕೋವಿಡ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಜೂನ್ 30ರ ವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಸೋಂಕನ್ನು ನಿಯಂತ್ರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದಿರುವ ಯಡಿಯೂರಪ್ಪ, ಲಾಕ್‍ಡೌನ್ ವಿಸ್ತರಣೆ ಅಥವಾ ಸಡಿಲಿಕೆಗೆ ಸಂಬಂಧಿಸಿದಂತೆ ಶನಿವಾರದೊಳಗೆ ಘೋಷಣೆ ಮಾಡಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News