ಎಸ್ಸಿ-ಎಸ್ಟಿ ಪ್ರಕರಣಗಳಲ್ಲಿ ವಕಾಲತ್ತು ವಹಿಸುವ ಅಭಿಯೋಜಕರಿಗೆ ತರಬೇತಿ ನೀಡಿ: ಸರಕಾರಕ್ಕೆ ಹೈಕೋರ್ಟ್ ಸಲಹೆ
ಬೆಂಗಳೂರು, ಜೂ. 2: ಎಸ್ಸಿ-ಎಸ್ಟಿ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣಗಳಲ್ಲಿ ವಕಾಲತ್ತು ವಹಿಸುವ ಅಭಿಯೋಜಕರಿಗೆ ಆನ್‍ಲೈನ್ ಮೂಲಕ ತರಬೇತಿ ಕೊಡಿಸಲು ಕರ್ನಾಟಕ ನ್ಯಾಯಾಂಗ ಅಕಾಡಮಿಯನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ.
ರಾಜ್ಯದಲ್ಲಿ ಎಸ್ಸಿ ಎಸ್ಟಿ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೋರಿ ಪರಿಶಿಷ್ಟ ಜಾತಿ-ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಸಲಹೆ ನೀಡಿದೆ.
ಕಾಯ್ಡೆಯಡಿ ದಾಖಲಾದ ಪ್ರಕರಣಗಳ ತನಿಖೆ ಸಾಕಷ್ಟು ವಿಳಂಬವಾಗುತ್ತಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳು ಖುಲಾಸೆಯಾಗುತ್ತಿರುವ ಅಂಶವನ್ನು ಪರಿಗಣಿಸಿದ್ದ ಪೀಠ, ಪ್ರಕರಣಗಳ ತನಿಖಾಧಿಕಾರಿಗಳಿಗೆ ಹಾಗೂ ಅಭಿಯೋಜಕರಿಗೆ ಕಾಯ್ದೆಯ ಕುರಿತು ಹೆಚ್ಚಿನ ಮಾಹಿತಿ ಮತ್ತು ತರಬೇತಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೇ, ಈ ಸಂಬಂಧ ನ್ಯಾಯಾಂಗ ಅಕಾಡಮಿಯಿಂದ ತರಬೇತಿ ಕೊಡಿಸಲು ಸರಕಾರ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿತ್ತು.
ಅರ್ಜಿ ಮತ್ತೆ ವಿಚಾರಣೆಗೆ ಬಂದ ವೇಳೆ ನ್ಯಾಯಾಲಯದ ಸೂಚನೆ ಪಾಲನೆಯಾಗದ ಹಿನ್ನೆಲೆಯಲ್ಲಿ, ಸರಕಾರ ಅಭಿಯೋಜಕರಿಗೆ ತರಬೇತಿ ಕೊಡಿಸಲು ಕರ್ನಾಟಕ ನ್ಯಾಯಾಂಗ ಅಕಾಡಮಿಯ ನಿರ್ದೇಶಕರನ್ನು ಸಂಪರ್ಕಿಸಬಹುದು. ಹಾಗೆಯೇ, ಆನ್ ಲೈನ್ ಮೂಲಕವೇ ತರಬೇತಿ ಕೊಡಿಸಲು ಕ್ರಮ ಕೈಗೊಳ್ಳಬಹುದು. ಸೂಕ್ತ ತರಬೇತಿ ಸಿಕ್ಕಲ್ಲಿ ತನಿಖಾಧಿಕಾರಿಗಳ ತನಿಖಾ ಕ್ರಮದಲ್ಲಿ ಹಾಗೂ ಅಭಿಯೋಜಕರ ಕೆಲಸದಲ್ಲಿ ಗುಣಮಟ್ಟ ಕಾಣಬಹುದು ಎಂದಿದೆ. ಹಾಗೆಯೇ ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.