ವಿಜಯಪುರ: ಮಾಜಿ ಶಾಸಕ ಎನ್.ಎಸ್.ಖೇಡ ನಿಧನ

Update: 2021-06-03 06:57 GMT

ವಿಜಯಪುರ, ಜೂ.3: ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಇಬ್ಬರು ಸಹೋದರರು, ನಾಲ್ವರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಸಾವಳಸಂಗದಲ್ಲಿ ಗುರುವಾರ ಸಂಜೆ ನೆರವೇರಲಿದೆ.

ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ರೈತ ಕುಟುಂಬದಿಂದ ಬಂದಿದ್ದ ಎನ್.ಎಸ್.ಖೇಡ ಅವರು ವಿಜಯಪುರ ಜಿಲ್ಲೆಯ ಮುತ್ಸದ್ದಿ ನಾಯಕ ದಿ.ಬಿ.ಎಂ.ಪಾಟೀಲ್‍ರ ಅನುಯಾಯಿಯಾಗಿ ಯುವ ವಯಸ್ಸಿನಲ್ಲಿಯೇ ರಾಜಕೀಯ ಪವೇಶ ಮಾಡಿದ್ದರು. 1980ರಲ್ಲಿ ಜನತಾ ಪಕ್ಷದಿಂದ ಲೋಕಸಭೆಯಲ್ಲಿ ಸ್ಪರ್ಧಿಸಿ, ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದ್ದರು. ಮಾಜಿ ಪ್ರಧಾನಿಗಳಾದ ಚಂದ್ರಶೇಖರ, ಎಚ್.ಡಿ.ದೇವೇಗೌಡರ ದೀರ್ಘಕಾಲ ಒಡನಾಡಿಯಾಗಿದ್ದ ಎನ್.ಎಸ್.ಖೇಡ, 1985-89 ರವರೆಗೆ ಇಂಡಿ ಕ್ಷೇತ್ರದ ಶಾಸಕರಾಗಿದ್ದರು.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಸದಸ್ಯರಾಗಿ, ವಿಜಯಪುರದ ಹಿಟ್ನಳ್ಳಿಯಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಕಾರಣರಾಗಿದ್ದರು. ಬಿ.ಎಲ್.ಡಿ.ಇ ಸಂಸ್ಥೆಯ ಆಜೀವ ಸದಸ್ಯರಾಗಿ, ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾಗಿ, ವೈದ್ಯಕೀಯ ಕಾಲೇಜು ಸ್ಥಾಪನೆಯಲ್ಲಿ ಶ್ರಮವಹಿಸಿದ್ದರು.

ಸಂತಾಪ: ಎನ್.ಎಸ್.ಖೇಡ ನಿಧನಕ್ಕೆ ಮಾಜಿ ಪ್ರಧಾನ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಹಿಂದುಳಿದ ಆಯೋಗಗಳ ಅಧ್ಯಕ್ಷ ಕೆ.ಜಯಪ್ರಕಾಶ ಹೆಗಡೆ, ವಿಧಾನಪ ರಿಷತ್ ಸದಸ್ಯರಾದ ಕೊಂಡಜ್ಜಿ ಮೋಹನ, ಸುನೀಲಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News