ರಾಜ್ಯದಲ್ಲಿ ಜೂ.14ರವರೆಗೆ ಲಾಕ್‌ಡೌನ್ ವಿಸ್ತರಣೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-06-03 14:33 GMT

ಬೆಂಗಳೂರು, ಜೂ. 3: `ಕೋವಿಡ್-19 ವೈರಸ್ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಹೇರಿರುವ ಲಾಕ್‍ಡೌನ್ ಅನ್ನು ಜೂ. 14ರವರೆಗೆ ವಿಸ್ತರಿಸಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿಲ್ಲಿ ಘೋಷಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಲಾಕ್‍ಡೌನ್ ಅವಧಿಯನ್ನು ರಾಜ್ಯ ಸರಕಾರ ಒಂದು ವಾರ ಕಾಲ ವಿಸ್ತರಿಸಿದೆ. ಲಾಕ್‍ಡೌನ್ ಜೂ.14ರ ಬೆಳಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಜಾರಿಯಲ್ಲಿರಲಿದೆ. ಕೋವಿಡ್-19 ವೈರಸ್ ಸೋಂಕಿನ ಪಾಸಿಟಿವ್ ದರ ಶೇ.5ಕ್ಕೆ ಇಳಿದರೆ ಮಾತ್ರ ಜೂ.14ರ ನಂತರ ಲಾಕ್‍ಡೌನ್ ಅನ್ನು ಸಂಪೂರ್ಣ ತೆರವುಗೊಳಿಸಲಾಗುವುದು' ಎಂದು ತಿಳಿಸಿದರು.

ಈಗಾಗಲೇ ಘೋಷಿಸಿರುವಂತೆ ಸಂಪೂರ್ಣವಾಗಿ ರಫ್ತು ಮಾಡಲಾಗುವ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಒಟ್ಟು ಸಿಬ್ಬಂದಿ ಪೈಕಿ ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ವಿನಾಯಿತಿ ಮುಂದುವರೆಯಲಿದೆ. ಹಾಗೆಯೇ ಹೊಟೇಲ್‍ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಉಳಿದಂತೆ ಜೂ.14ರವರೆಗೂ ಲಾಕ್‍ಡೌನ್ ಯಥಾಸ್ಥಿತಿ ಮುಂದುವರೆಯಲಿದೆ. ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಕೊರೋನ ಸೋಂಕು ನಿಯಂತ್ರಿಸಲು ಈ ನಿರ್ಬಂಧ ಅನಿವಾರ್ಯ' ಎಂದು ಯಡಿಯೂರಪ್ಪ ವಿವರಣೆ ನೀಡಿದರು.

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮೀನು, ಮಾಂಸ, ಮೊಟ್ಟೆ, ದಿನಸಿ ಸಹಿತ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರಲಿದೆ. ಆಸ್ಪತ್ರೆ, ಆ್ಯಂಬುಲೆನ್ಸ್, ಹಾಲು ಮತ್ತು ಮಾಧ್ಯಮ ಪ್ರತಿನಿಧಿಗಳು, ಫುಡ್ ಡೆಲವರಿ ಸೇರಿದಂತೆ ಅಗತ್ಯ ಸೇವಾ ಸಿಬ್ಬಂದಿ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಜನರು ಮನಸೋ ಇಚ್ಛೆ ತಿರುಗಾಡುವುದನ್ನು ನಿಲ್ಲಿಸಬೇಕು ಎಂದರು.

ಗ್ರಾಮೀಣ ಪ್ರದೇಶಕ್ಕೂ ಹಬ್ಬಿರುವ ಕೋವಿಡ್ ವೈರಸ್ ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಎಲ್ಲರೂ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಜತೆಗೆ ವ್ಯಕ್ತಿಗತ ಅಂತರ ಕಾಯ್ದು ಕೊಳ್ಳುವುದರ ಜೊತೆಗೆ ಕೋವಿಡ್ ವೈರಸ್ ಸೋಂಕು ನಿಯಂತ್ರಣಕ್ಕೆ ಎಲ್ಲರೂ ಸರಕಾರದೊಂದಿಗೆ ಕೈಗೋಡಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಕೋವಿಡ್-19 ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ, ರಾಜ್ಯಾದ್ಯಂತ ಜೂ.7ರವರೆಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಜೂನ್ 14ರವರೆಗೆ ವಿಸ್ತರಿಸಲಾಗಿದೆ. ನಾಗರಿಕರು ಎಲ್ಲ ನಿಯಮಗಳನ್ನು ಪಾಲಿಸಿ, ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ತಜ್ಞರ ಸಲಹೆ ಮೇರೆಗೆ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕೋವಿಡ್ ಮುಂಜಾಗ್ರತಾ ನಿರ್ಬಂಧಗಳನ್ನು ಜೂನ್ 14ರವರೆಗೆ ವಿಸ್ತರಿಸಲಾಗಿದೆ. ಮಾರ್ಗಸೂಚಿಯಲ್ಲಿರುವ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಕೊರೋನ ನಿಯಂತ್ರಣಕ್ಕೆ ಸಹಕರಿಸಬೇಕು

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News