''ಹಿಂದೂ ರಕ್ಷಣಾ ತಜ್ಞೆ ಶೋಭಾ ಅವರೇ, ಚಾಮರಾಜನಗರದ ಹಿಂದೂಗಳ ಸಾವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?''

Update: 2021-06-03 14:53 GMT

ಬೆಂಗಳೂರು, ಜೂ. 3: 'ಸಂಸದೆ ಶೋಭಾ ಕರಂದ್ಲಾಜೆ ಅವರೇ, ಕೋವಿಡ್ ಲಾಕ್‍ಡೌನ್ ಅಸಹಾಯಕತೆಯಿಂದ ಚಾಮರಾಜನಗರದಲ್ಲಿ ನಾಲ್ವರು ಹಿಂದೂಗಳ ಸಾವಾಗಿದೆ. ಹಿಂದೂಗಳ ರಕ್ಷಣೆ ನಿಮ್ಮ ಹೊಣೆಯಲ್ಲವೇ? ಈ ಅಸಹಾಯಕ ಸಾವುಗಳ ಬಗ್ಗೆ 'ಹಿಂದೂ ರಕ್ಷಣಾ ತಜ್ಞೆ'ಯಾದ ನಿಮ್ಮ ಅಭಿಪ್ರಾಯವೇನು?' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಮಹದೇವಪ್ಪ ಅವರು, `ಕೋವಿಡ್ ಸೋಂಕು ತಡೆಗೆ ಲಾಕ್ ಮಾಡಿಕೊಂಡು ಬಡ ಕುಟುಂಬಗಳಿಗೆ ಆಹಾರವನ್ನೂ ನೀಡದೇ ಅವರ ಸಾವಿಗೆ ಕಾರಣವಾಗುತ್ತಿರುವ ರಾಜ್ಯ ಬಿಜೆಪಿ ಸರಕಾರ ಬಡವರಿಗೆ ನೆರವಾಗುವ ಇಚ್ಛೆ ಇಲ್ಲದಿದ್ದರೆ ಕೊರೋನ ಲಾಕ್‍ಡೌನ್ ಅನ್ನು ರದ್ದುಗೊಳಿಸಲಿ! ಲಾಕ್‍ಡೌನ್ ಮಾಡಬೇಕಾಗಿರುವುದು ಪ್ರಾಣ ಉಳಿಸಲೆಂದೇ ವಿನಃ ಪ್ರಾಣ ತೆಗೆಯಲು ಅಲ್ಲ' ಎಂದು ಸಲಹೆ ನೀಡಿದ್ದಾರೆ.

ಇನ್ನು ಕೊರೋನ ಸೋಂಕು ಬಂದು ಸಹಜೀವಿಗಳು ಕಷ್ಟದಲ್ಲಿದ್ದಾಗ ಕನಿಷ್ಠ ಸಹಾಯ ಮಾಡಲಾಗದಿದ್ದರೂ ಅವರನ್ನು ನಿಂದಿಸಿ ಮನಸ್ಸು ನೋಯಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೂ ಮಾನವೀಯ ಪ್ರಜ್ಞೆಯನ್ನು ಮೀರಿ ಸೋಂಕಿತರನ್ನು ಹಿಂಸಿಸುವ, ದೌರ್ಜನ್ಯ ಎಸಗುವವರ ಮೇಲೆ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಲಿ' ಎಂದು ಮಹದೇವಪ್ಪ ಆಗ್ರಹಿಸಿದ್ದಾರೆ.

ಲಾಕ್‍ಡೌನ್ ವಿಸ್ತರಿಸುವ ಸಮಯದಲ್ಲಿ ಆ ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುವ ಜನ ಸಾಮಾನ್ಯರು ಬದುಕಿಗೆ ನೆರವಾಗಬೇಕೆಂಬ ಕನಿಷ್ಠ ಪ್ರಜ್ಞೆಯಿಲ್ಲದ ಈ ಕ್ರೂರ ಸರಕಾರದ ಅಸಮರ್ಥತೆಯೇ ಮುಗ್ಧ ಬಡಜನರ ಸಾವುಗಳಿಗೆ ನೇರ ಕಾರಣ. ಇದರ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ಹೊರಬೇಕು' ಎಂದು ಮಾಜಿ ಸಚಿವ ಡಾ.ಮಹದೇವಪ್ಪ ಎಚ್ಚರಿಸಿದ್ದಾರೆ.

ಕೊರೋನ ಸೋಂಕಿನ ಸಂದರ್ಭದಲ್ಲಿನ ಬಡತನದಿಂದಾಗಿ ಚಾಮರಾಜನಗರದಲ್ಲಿ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖದ ವಿಷಯ. ನಿಜಕ್ಕೂ ಈ ಸಾವುಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ರಾಜ್ಯ ಬಿಜೆಪಿ ಸರಕಾರದ ಬೇಜವಾಬ್ದಾರಿ ತನದಿಂದ ಉಂಟಾದ ಸಾವು' ಎಂದು ಮಹದೇವಪ್ಪ ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News