ಕೊರೋನ ಸೋಂಕಿತರ ಪರದಾಟ ತಪ್ಪಿಸಲು ಜಿಲ್ಲಾಡಳಿತದಿಂದ 'ಸುರಕ್ಷಾ ಚಿಕ್ಕಮಗಳೂರು' ವೆಬ್‍ಸೈಟ್
ಚಿಕ್ಕಮಗಳೂರು, ಜೂ.3: ಕೊರೋನ ಸೋಂಕಿನ ಆರ್ಭಟಕ್ಕೆ ಸಾರ್ವಜನಿಕರು ಹೈರಾಣಾಗಿರುವುದು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಸೋಂಕಿಗೆ ತುತ್ತಾದವರು ಚಿಕಿತ್ಸೆಗೆ ಪಡೆದುಕೊಳ್ಳಲೂ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಬೆಡ್ ಸಿಕ್ಕಿದರೂ ಆಕ್ಸಿಜನ್ ಕೊರತೆ ಎದುರಾಗಿರುವಂತಹ ಸಮಸ್ಯೆಗಳು ರಾಜ್ಯಾದ್ಯಂತ ವರದಿಯಾಗುತ್ತಿವೆ. ಸೋಂಕಿತರ ಈ ಪರದಾಟ ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ತನ್ನದೇಯಾದ ವೆಬ್‍ಸೈಟ್ ಒಂದನ್ನು ಆರಂಭಿಸುವ ಮೂಲಕ ಸೋಂಕಿತರ ಈ ಸಮಸ್ಯೆಗಳಿಗೆ ಪರಿಹಾರ ಒದಗಿಲು ಮುಂದಾಗಿದೆ.
ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೋಂಕಿಗೆ ತುತ್ತಾದವರ ಕುಟುಂಬಗಳು ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುತ್ತಾ ಯಾತನೆ ಅನುಭವಿಸುತ್ತಿದ್ದಾರೆ. ಸೋಂಕಿತರು ಮತ್ತು ಅವರ ಕುಟುಂಬದವರ ಈ ಅಲೆದಾಟ ತಪ್ಪಿಸುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾಡಳಿತ 'ಸುರಕ್ಷಾ ಚಿಕ್ಕಮಗಳೂರು' ಎಂಬ ವೆಬ್‍ಸೈಟ್‍ಗೆ ಗುರುವಾರ ಚಾಲನೆ ನೀಡಿದ್ದು, ಸುರಕ್ಷಾಸಿಕೆಎಂ.ಕಾಮ್ ( https://surakshackm.com/ )ಎಂದು ಗೂಗಲ್ ಸರ್ಚ್ ಮಾಡಿದರೆ ಈ ವೆಬ್‍ಸೈಟ್ ತೆರೆದುಕೊಳ್ಳುತ್ತದೆ.
ಈ ವೆಬ್‍ಸೈಟ್‍ನಲ್ಲಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರಿಗೆ ಲಭ್ಯ ಇರುವ ಬೆಡ್‍ಗಳ ಸಂಖ್ಯೆ, ಖಾಲಿ ಇರುವ ಆಕ್ಸಿಜನ್ ಬೆಡ್‍ಗಳ ಸಂಖ್ಯೆ, ಕೊರೋನ ಸೋಂಕಿಗೆ ಯಾವ ಯಾವ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ, ಬೆಡ್ ಸಿಗದಿದ್ದಲ್ಲಿ ಯಾರ ನೆರವು ಪಡೆದುಕೊಳ್ಳಬೇಕು, ಆರೋಗ್ಯ ವಿಮೆಯಡಿಯಲ್ಲಿ ಚಿಕಿತ್ಸೆ ಪಡೆಯುವ ವಿಧಾನ ಮತ್ತಿತರ ಮಾಹಿತಿಗಳು ಸಾರ್ವಜನಿಕರಿಗೆ ಸಿಗಲಿದ್ದು, ಸೋಂಕಿತರ ಸಂಬಂಧಿಗಳು ನೆರವಿಗೆ ಸಂಪರ್ಕಿಸಬೇಕಾದ ನೋಡಲ್ ಅಧಿಕಾರಿಗಳ ಮೊಬೈಲ್ ನಂಬರ್ ಗಳನ್ನೂ ಈ ವೆಬ್‍ಸೈಟ್‍ನಲ್ಲಿ ನೀಡಲಾಗಿದೆ.
ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರು ಚಿಕಿತ್ಸೆಗೆ ದಾಖಲಾಗುವ ಸಂದರ್ಭದಲ್ಲಿ ಬೆಡ್ ಸಿಗದ ಕುರಿತು ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ತುತ್ತಾದ ವ್ಯಕ್ತಿಯ ಕುಟುಂಬದವರು ಹಾಸಿಗೆ ಲಭ್ಯವಿರುವ ಆಸ್ಪತ್ರೆಯನ್ನು ಹುಡುಕಲು ಪರದಾಡಬೇಕಿತ್ತು. ಇದನ್ನು ತಪ್ಪಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ವೆಬ್‍ಸೈಟ್ ಆರಂಭಿಸಿದ್ದು, ಇಂದಿನಿಂದ ಅದು ಕಾರ್ಯಾರಂಭ ಮಾಡಿದೆ.
ಈ ಮೊದಲು ಕೊರೋನ ಸೋಂಕಿತ ವ್ಯಕ್ತಿ ಜಿಲ್ಲಾಸ್ಪತ್ರೆಗೆ ಬಂದಾಕ್ಷಣ ಅವರ ಕೈಗೆ ಸಂಬಂಧಿಸಿದ ವೈದ್ಯರು ಸ್ಲಿಪ್ ಬರೆದು ಕೊಡುತ್ತಿದ್ದರು. ಅದನ್ನು ಹಿಡಿದುಕೊಂಡು ಸೋಂಕಿತ ವ್ಯಕ್ತಿಯ ಸಿಬ್ಬಂದಿ ವಿವಿಧ ಆಸ್ಪತ್ರೆಗಳ ಬಾಗಿಲ ಬಳಿ ತೆರಳಿ ಹಾಸಿಗೆಗಾಗಿ ವೈದ್ಯರು ಮತ್ತು ಆಡಳಿತ ಮಂಡಳಿ ಬಳಿ ಅಂಗಲಾಚಬೇಕಾಗಿತ್ತು. ಅಲ್ಲಿ ಹಾಸಿಗೆ ಲಭ್ಯವಿದ್ದರೂ ಸೋಂಕಿತ ವ್ಯಕ್ತಿಯ ಕುಟುಂಬದವರನ್ನು ಕಾಯಿಸಿ, ಸತಾಯಿಸುತ್ತಿದ್ದ ಘಟನೆಗಳು ಈ ಹಿಂದೆ ಜಿಲ್ಲೆಯಲ್ಲೂ ವರದಿಯಾಗಿದ್ದವು. ಹಾಗಾಗಿ ಕೊರೋನ ಸೋಂಕಿಗೆ ತುತ್ತಾದ ವ್ಯಕ್ತಿ ಹಾಸಿಗೆಗಾಗಿ ಪರದಾಡುವುದನ್ನು ತಪ್ಪಿಸಲು ಜಿಲ್ಲಾಡಳಿತ ಜಿಲ್ಲೆಯ ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಬೆಡ್‍ಗಳ ಸಂಖ್ಯೆ ಮತ್ತಿತತರ ಮಾಹಿತಿಗಳನ್ನೊಳಗೊಂಡ ವೆಬ್‍ಸೈಟ್ ಆರಂಭಗೊಂಡಿದೆ.
ಸೋಂಕಿತರ ಅನುಕೂಲಕ್ಕಾಗಿ ಸುರಕ್ಷಾ ಚಿಕ್ಕಮಗಳೂರು ಎಂಬ ಹೆಸರಿನ ವೆಬ್‍ಸೈಟ್‍ಅನ್ನು ಜಿಲ್ಲಾಡಳಿತಕ್ಕೆ ಕ್ಯಾಪ್ಸೂಲ್ಸ್ ಟೆಕ್ನಾಲಜಿ ಪ್ರೈ.ಲಿ. ಸಂಸ್ಥೆ ಅಭಿವೃದ್ಧಿಪಡಿಸಿ ನೀಡಿದೆ. ಸಂಸ್ಥೆಯ ಅರ್ಜುನ್ ಮತ್ತು ನಿತಿನ್ ಕಾಮತ್ ನೇತೃತ್ವ ತಂಡ ಜಿಲ್ಲಾಡಳಿತಕ್ಕಾಗಿ ಈ ವೆಬ್‍ಸೈಟ್ ಅಭಿವೃದ್ಧಿಪಡಿಸಿದೆ. ಈ ವೆಬ್‍ಸೈಟ್ ಕೋವಿಡ್ ಬೆಡ್ ಅಲೋಕೇಶನ್ ಮಾನಿಟರಿಂಗ್ ಸಿಸ್ಟಂ ಎಂದು ತೆರೆದುಕೊಳ್ಳುತ್ತಿದ್ದು, ವೆಬ್‍ಸೈಟ್‍ನಲ್ಲಿ ಖಾಲಿ ಇರುವ ಬೆಡ್‍ಗಳ ಸಂಖ್ಯೆ, ಸಹಾಯವಾಣಿ, ಹೆಲ್ಪ್ ಲೈನ್‍ನ ನಂಬರ್ ಗಳೂ ಸಿಗುತ್ತವೆ. ಸೋಂಕಿತರು ಅಥವಾ ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಗಳ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ವೆಬ್‍ಸೈಟ್‍ನಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಹೆಸರು ನೋಂದಯಿಸಿಕೊಂಡಿರುವ ಜಿಲ್ಲೆಯ ಆಶ್ರಯ, ಕೆ.ಆರ್.ಎಸ್., ಹೋಲಿಕ್ರಾಸ್, ಚೇತನ ಮತ್ತು ವಾತ್ಸಲ್ಯ ಎಂಬ 5 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಲಭ್ಯವಿದೆ. ಅಲ್ಲದೇ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿನ 7 ಸರಕಾರಿ ಆಸ್ಪತ್ರೆಗಳು, ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಬಾಲಕಿಯರ ಹಾಸ್ಟೆಲ್, ಕಳಸ, ಬೇಗಾರು, ಬಿದರಹಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಗಳೂ ಸೇರಿದಂತೆ ಜಿಲ್ಲೆಯಲ್ಲಿರುವ 10 ಕೋವಿಡ್ ಆರೈಕಾ ಕೇಂದ್ರಗಳ ಮಾಹಿತಿಗಳು ಸಿಗುತ್ತಿವೆ.
ಜಿಲ್ಲೆಯಲ್ಲಿನ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಆರೈಕಾ ಕೇಂದ್ರದಲ್ಲಿ ಖಾಲಿ ಇರುವ ಬೆಡ್‍ಗಳ ಸಂಖ್ಯೆ, ಜನರಲ್ ವಾರ್ಡ್, ಐಸಿಯು, ಐಸಿಯು ವೆಂಟಿಲೇಟರ್, ಆಮ್ಲಜನಕ ರಹಿತ ಹಾಸಿಗೆಗಳು ಲಭ್ಯ ಇವೆ ಎಂಬುದನ್ನೂ ಸೇರಿದಂತೆ ಸಂಬಂಧಿಸಿದ ಆಸ್ಪತ್ರೆಯಲ್ಲಿ ಆಯಾ ದಿನದಂದು ಚಿಕಿತ್ಸೆಗೆ ದಾಖಲಾಗಿರುವ ಸೋಂಕಿತರ ಸಂಖ್ಯೆ ಮತ್ತು ಲಭ್ಯವಿರುವ ಹಾಸಿಗೆಗಳ ಮಾಹಿತಿ ಈ ವೆಬ್‍ಸೈಟ್‍ನಲ್ಲಿ ಸಿಗುತ್ತವೆ.
ಕೊರೋನ ಸೋಂಕಿತರಿಗೆ ಲಭ್ಯವಿರುವ ಹಾಸಿಗೆಗಳ ಮಾಹಿತಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ಸಲುವಾಗಿ ಬೆಂಗಳೂರು ನಗರದ ಬಿಬಿಎಂಪಿಯಲ್ಲಿ ವೆಬ್‍ಸೈಟ್ ಆರಂಭಿಸಲಾಗಿದೆ. ಅದೇ ಮಾದರಿಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತವೂ ವೆಬ್‍ಸೈಟ್ ಆರಂಭಿಸಿದ್ದು, ಸೋಂಕಿತ ವ್ಯಕ್ತಿಯ ಕುಟುಂಬ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಮತ್ತು ಬೇಗ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಈ ವೆಬ್‍ಸೈಟ್ ಅನುಕೂಲ ಮಾಡಿಕೊಡಲಿದೆ. ಸೋಂಕಿಗೆ ತುತ್ತಾದ ವ್ಯಕ್ತಿಯ ಕುಟುಂಬದವರು ಈ ವೆಬ್‍ಸೈಟ್ ಮೂಲಕ ಸುಗಮ ಆರೋಗ್ಯ ಸೇವೆ ಪಡೆದುಕೊಳ್ಳಬಹುದಾಗಿದೆ. ಜಿಲ್ಲಾಡಳಿತದ ಈ ವೆಬ್‍ಸೈಟ್‍ಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್‍ಗೆ ಚಿಕಿತ್ಸೆ ನೀಡಲು ಆಯ್ಕೆಗೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಆಗುವ ತೊಂದರೆ ತಪ್ಪಿಸಲು ಜಿಲ್ಲಾಡಳಿತ ಪ್ರತೀ ಖಾಸಗಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನೇಮಕಮಾಡಿದ್ದು, ವೆಬ್‍ಸೈಟ್‍ಗೆ ಹೋಗಿ ಹೆಲ್ಪ್ ಲೈನ್‍ಗೆ ಕ್ಲಿಕ್ ಮಾಡಿದರೆ ಸಂಬಂಧಿಸಿದ ಆಸ್ಪತ್ರೆಯ ನೋಡಲ್ ಅಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆ ಸಿಗುತ್ತದೆ. ಅವರಿಗೆ ಕರೆಮಾಡಿದರೆ, ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಸಹಾಯ ಮಾಡುತ್ತಾರೆ. ಈ ನೋಡೆಲ್ ಅಧಿಕಾರಿಗಳು ಸರಕಾರಿ ಆಸ್ಪತ್ರೆ ವೈದ್ಯರ ಶಿಫಾರಸು ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ, ಊಟೋಪಚಾರ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿ ನ್ಯೂನತೆ ಕಂಡು ಬಂದರೆ ಸರಿಪಡಿಸುವಂತೆ ವೈದ್ಯರು ಮತ್ತು ಆಡಳಿತ ಮಂಡಳಿಗೆ ತಿಳಿಸುತ್ತಾರೆ.