'ಬ್ಲ್ಯಾಕ್ ಫಂಗಸ್' ಔಷಧಿ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2021-06-03 16:37 GMT

ಬೆಂಗಳೂರು, ಜೂ.3: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಔಷಧಗಳು ಕೊರತೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ವಕೀಲ ಪಿ.ರವೀಂದ್ರ ಎಂಬುವರು ಹೈಕೋರ್ಟ್ ಗೆ ಬರೆದ ಪತ್ರದ ಸಾರಾಂಶ ಪ್ರಸ್ತಾಪಿಸಿದ ಪೀಠ, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ಬಳಸುವ ಲೈಪೋಸೋಮಲ್ ಆ್ಯಂಫೋಟೆರಿಸಿನ್ ಬಿ' ಚುಚ್ಚುಮದ್ದು ಕೊರತೆಯಾಗಿದೆ ಎಂದಿದ್ದಾರೆ. ಹಾಗಾದರೆ, ವಾಸ್ತವ ಸ್ಥಿತಿಗಳೇನು, ರಾಜ್ಯದಲ್ಲಿ ಔಷಧಗಳ ಕೊರತೆ ಇದೆಯೇ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಇದಕ್ಕೆ ರಾಜ್ಯ ಸರಕಾರದ ಪರ ವಕೀಲರು ಉತ್ತರಿಸಿ, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆಯಾಗಿವೆ. ಚಿಕಿತ್ಸೆಗೆ ಬಳಸುವ ಔಷಧ ಭಾರತದಲ್ಲಿ ತಯಾರಾಗುತ್ತಿಲ್ಲ. ಅದನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ. ಔಷಧ ಲಭ್ಯವಾಗುವಂತೆ ನೋಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಹೇಳಿಕೆ ಪರಿಗಣಿಸಿದ ಪೀಠ, ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಔಷಧ ಕೊರತೆಯಾಗದಂತೆ ರಾಜ್ಯ ಸರಕಾರ ಗಮನ ಹರಿಸಬೇಕು. ಸೋಂಕು ನಿಯಂತ್ರಣಕ್ಕೆ ಸಂಬಂಧಿದಂತೆ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರವೂ ಅಗತ್ಯ ನೆರವು ನೀಡಬೇಕು. ಹಾಗೆಯೇ, ಔಷಧ ಹಂಚಿಕೆ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News