ದಲಿತರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲ: ಮಾವಳ್ಳಿ ಶಂಕರ್ ಆರೋಪ

Update: 2021-06-03 16:50 GMT

ಬೆಂಗಳೂರು, ಜೂ.3: ಇಡೀ ದೇಶವೇ ಕೋವಿಡ್ ಸಂಕಷ್ಟದಿಂದ ಸಮಸ್ಯೆ ಎದುರಿಸುತ್ತಿದೆ, ಬಡಜನರಿಗೆ ಜೀವನ ಮಾಡುವುದೇ ದುಸ್ತರವಾಗಿರುವ ಈ ಸಮಯದಲ್ಲೇ ರಾಜ್ಯದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ನೋವಿನ ಸಂಗತಿಯಾಗಿದೆ. ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ದಲಿತ ಮೇಲಿನ ದೌರ್ಜನ್ಯಗಳ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕಾರ ಪ್ರವೀಣ್ ಸೂದ್‍ಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ಸಂದರ್ಭದಲ್ಲೇ ದಲಿತ ಸಮುದಾಯದವರ ಮೇಲಿನ ಅತ್ಯಾಚಾರ, ಕೊಲೆ ಮತ್ತು ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ, ಪೊಲೀಸ್ ಇಲಾಖೆ ದಲಿತರ ಆಸ್ತಿ, ಮಾನ-ಪ್ರಾಣಗಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಇಡೀ ಇಲಾಖೆಯೇ ದಲಿತರ ವಿಚಾರದಲ್ಲಿ ಸಂವೇದನೆಯನ್ನು ಕಳೆದುಕೊಂಡಂತೆ ವರ್ತಿಸುತ್ತಿರುವುದು ನೋವಿನ ಸಂಗತಿ ಎಂದು ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ವಿಜಯಪುರದಲ್ಲಿ ನಡೆದ ದಲಿತ ಅಪ್ರಾಪ್ತ ಬಾಲಕಿಯರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಗೋಣಿಬೀಡಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವಲ್ಲಿ ನಿರ್ಲಕ್ಷ್ಯ ಮಾಡಿದೆ. ಇಂತಹ ನಿರ್ಲಕ್ಷ್ಯ ದಲಿತರ ವಿಚಾರದಲ್ಲಿ ಯಾಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಗಂಭೀರವಾಗಿ ಪರಿಗಣಿಸಿ ದಲಿತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡುವಂತೆ ತಮ್ಮ ಅಧೀನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ನರಸಿಂಹ ಮೂರ್ತಿ, ದಸಂಸ ಹಿರಿಯ ಮುಖಂಡ ಸಿದ್ದಾರ್ಥ ಶ್ರೀನಿವಾಸ್, ಮಂಜುನಾಥ್ ಸಿದ್ದಾಪುರ ಮತ್ತಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News