×
Ad

ಮ್ಯಾನ್‌ಹೋಲ್ ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತ್ಯು

Update: 2021-06-04 16:48 IST

ಬೆಂಗಳೂರು, ಜೂ. 4: ರಾಮನಗರ ಜಿಲ್ಲೆಯ ಐಜೂರಿನ ನೇತಾಜಿ ಪಾಪ್ಯುಲರ್ ಶಾಲೆ ಸಮೀಪದಲ್ಲಿ ನಿರ್ಮಾಣ ಹಂತದ ಮ್ಯಾನ್‍ಹೋಲ್‍ಗೆ ಇಳಿದ ಮೂವರು ಕಾರ್ಮಿಕರು ವಿಷಾನೀಲ ಸೇವಿಸಿ ಉಸಿರುಗಟ್ಟಿ ಅಸುನೀಗಿದ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮೃತಪಟ್ಟ ಕೂಲಿ ಕಾರ್ಮಿಕರನ್ನು ಬೆಂಗಳೂರಿನ ಕಮಲನಗರದ ನಿವಾಸಿಗಳಾದ ಮಂಜುನಾಥ್(29) ಮಂಜುನಾಥ್(32) ಹಾಗೂ ರಾಜೇಶ್(40) ಎಂದು ಗುರುತಿಸಲಾಗಿದೆ. ನಗರದ ವಾರ್ಡ್ ಸಂಖ್ಯೆ 30ರ ಒಳಚರಂಡಿ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೊಸ ಚರಂಡಿಗೆ ಹಾಕಲಾಗಿದ್ದ ಬ್ಲಾಕ್ ಅನ್ನು ತೆಗೆಯಲು ಮೂವರು ಕಾರ್ಮಿಕರು 15 ಅಡಿ ಆಳದಲ್ಲಿನ ಮ್ಯಾನ್‍ಹೋಲ್‍ಗೆ ಇಳಿದಿದ್ದರು ಎಂದು ಹೇಳಲಾಗಿದೆ.

ಮೊದಲಿಗೆ ರಾಜೇಶ್ ಕೆಳಗೆ ಇಳಿದಿದ್ದು, ಆಯ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ತಗುಲಿದೆ. ಅವರನ್ನು ರಕ್ಷಿಸಲು ಉಳಿದ ಇಬ್ಬರು ಕಾರ್ಮಿಕರು ಕೆಳಗೆ ಇಳಿದಿದ್ದು, ಮೂವರು ವಿಷಾನೀಲ ಸೇವನೆ ಮಾಡಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುದ್ದಿತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿ ಶಾಮಕ ಸಿಬ್ಬಂದಿ, ಉಪವಿಭಾಗಾಧಿಕಾರಿ ಮಂಜುನಾಥ್, ತಹಶಿಲ್ದಾರ್ ನರಸಿಂಹಮೂರ್ತಿ, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೂವರ ಮೃತದೇಹಗಳನ್ನು ಮ್ಯಾನ್‍ಹೋಲ್‍ನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರಾಮನಗರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಮೇಲ್ಕಂಡ ಪ್ರಕರಣದಲ್ಲಿ ಒಳಚರಂಡಿ ಗುತ್ತಿಗೆದಾರ ನಿರ್ಲಕ್ಷ್ಯ ವಹಿಸಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ವಹಿಸದೆ ಕೂಲಿ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ್ದು, ಮೂವರು ಮಂದಿಯ ಸಾವಿಗೆ ಕಾರಣವಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪವೂ ಇದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಪರಿಹಾರಕ್ಕೆ ಮನವಿ: ಕೋವಿಡ್ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆಗಾಗಿ ಲಾಕ್‍ಡೌನ್ ಅನ್ನು ಲೆಕ್ಕಿಸದೆ ಒಳಚರಂಡಿ ಕೆಲಸಕ್ಕೆ ತೆರಳಿದ್ದ ಮೂರು ಮಂದಿ ಕೂಲಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಅವರ ಕುಟುಂಬದ ಸದಸ್ಯರಿಗೆ ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ಮುಖಂಡ ನಿಖಿಲ್ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಖುದ್ದು ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಆ ಬಳಿಕ ಎಸ್ಪಿ ಕಚೇರಿಗೆ ಭೇಟಿ ನೀಡಿ ಘಟನೆ ಬಗ್ಗೆ ಎಸ್ಪಿ ಅವರಿಂದ ಮಾಹಿತಿ ಪಡೆದ ನಿಖಿಲ್ ಕುಮಾರಸ್ವಾಮಿ, ಕಾರ್ಮಿಕರ ಸಾವಿನಿಂದ ಅವರ ಕುಟುಂಬ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News